ಮಂಗಳೂರು : ನಗರದಲ್ಲಿ ಮತ್ತೆ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಬಿಜೈ ಕಾಪಿಕಾಡ್ ಬಳಿಯ ದಡ್ಡಲ್ ಕಾಡು ಬಳಿ ಇಂದು ಬೆಳಗ್ಗಿನ ಜಾವಾ ಈ ದರೋಡೆ ನಡೆದಿದೆ.

ಕೋಟೆಕಣಿ ಒಂದನೇ ಕ್ರಾಸ್ ನಲ್ಲಿ ವಿಕ್ಟರ್ ಮೆಂಡೋನ್ಸಾ (71) ಪ್ಯಾಟ್ರಿಷಾ ಮೆಂಡೋನ್ಸಾ (60) ಎಂಬವರಿಗೆ ಸೇರಿದ ಕರೀಷ್ಮಾ ಎನ್ನುವ ಮನೆಯಲ್ಲಿ ದರೋಡೆ ನಡೆದಿದ್ದು, ಮಕ್ಕಳಿಬ್ಬರು ವಿದೇಶದಲ್ಲಿದ್ದು, ದಂಪತಿಗಳಿಬ್ಬರು ಮಾತ್ರ ಮನೆಯಲ್ಲಿ ಉಳಿದಿದ್ದರು.
ಬೆಡ್ ರೂಂನ ಕಿಟಿಕಿ ಕಟ್ ಮಾಡಿ ಬಂದ ಖದೀಮರು ದರೋಡೆ ಮಾಡಿದ್ದಾರೆ. ವೃದ್ಧ ದಂಪತಿಗಳ ಮೇಲೆ ಹಲ್ಲೆ ನಡೆಸಿದ್ದು, ಇಬ್ಬರು ಎಜೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ಈ ದರೋಡೆ ಕೃತ್ಯ ನಡೆದಿದೆ. ಮನೆಯಲ್ಲಿದ್ದ ವೃದ್ದರನ್ನು ಕೂಡಿ ಹಾಕಿ, ಹಲ್ಲೆ ನಡೆಸಿ ದರೋಡೆ ಮಾಡಿ ಬಳಿಕ ಮನೆ ಮಾಲಕರ ಕಾರೊಂದಿಗೆ ಪರಾರಿಯಾಗಿದ್ದಾರೆ.
ತಂಡದಲ್ಲಿ 4 ಮಂದಿ ದರೋಡೆಕೋರರು ಇದ್ದರೆಂದು ತಿಳಿದು ಬಂದಿದೆ. ಮನೆಯವರಿಗೆ ಮಾರಕಾಯುಧ ತೋರಿಸಿ, ಹಲ್ಲೆ ನಡೆಸಿ ಬೆದರಿಸಿ ದರೋಡೆ ಕೃತ್ಯ ನಡೆಸಿದ್ದಾರೆ. ಬಳಿಕ ಮನೆಯ ಕಾರಿನ ಕೀ ಪಡೆದು ಆ ಕಾರಿನಲ್ಲಿ ಉಡುಪಿಯತ್ತ ತೆರಳಿದ್ದಾರೆ. ಹೆಜಮಾಡಿ ಟೋಲ್ ಗೇಟ್ ಸಮೀಪ ಕಾರು ನಿಲ್ಲಿಸಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಉರ್ವ ಪೊಲೀಸರು, ಹಿರಿಯ ಅಧಿಕಾರಿಗಳು, ಬೆರಳಚ್ಚು ತಜ್ಞರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮುಲ್ಕಿ ಪೊಲೀಸರು ಕಾರನ್ನು ಪತ್ತೆಹಚ್ಚಿ, ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಬೆನ್ನಲ್ಲೇ ಪೊಲೀಸರು ದರೋಡೆಗೈದ ಮನೆಯ ಸುತ್ತಮುತ್ತ, ರಸ್ತೆ, ಹೆದ್ದಾರಿಯ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

























