ಬೆಂಗಳೂರು : ಇತ್ತೀಚಿಗೆ ಕರ್ನಾಟಕದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲಂತೂ ಬೆಂಗಳೂರಿನಲ್ಲಿ ಸೈಬರ್ ವಂಚನೆ ಅಧಿಕವಾಗಿದೆ. ನಗರದಲ್ಲಿ ಸೈಬರ್ ವಂಚಕರ ಹಾವಳಿ ಮಿತಿ ಮೀರಿದ್ದು, ಪ್ರತಿ ವರ್ಷ ಹತ್ತು ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ. ಸೈಬರ್ ವಂಚಕರ ಬಲೆಗೆ ಬಿದ್ದು ಜನರು ಕೋಟ್ಯಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಈ ಸೈಬರ್ ವಂಚಕರು ಹೊಸ ಮಾರ್ಗ ಕಂಡುಕೊಂಡಿದ್ದಾರೆ.
ಆಧಾರ್ ಕಾರ್ಡ್ ಬಳಸಿಕೊಂಡು ಸಾರ್ವಜನಿಕರ ಹಣ ಲಪಟಾಯಿಸುವುದು, ಹಾಗೂ ಅಶ್ಲೀಲ ಪೋಟೊ, ವೀಡಿಯೋ ತೋರಿಸಿ ಜನರಿಗೆ ಬ್ಲಾಕ್ ಮೇಲ್ ಮಾಡುವುದು. ವೀಡಿಯೋ ಕರೆ ಮಾಡಿ ಜನರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುವುದು. ಕೆಲಸ ಕೊಡಿಸುವುದು, ಗಿಪ್ಟ್ ಹೆಸರಲ್ಲಿ ವಂಚಿಸಲಾಗುತ್ತಿತ್ತು.
ಇದೀಗ ಸೈಬರ್ ವಂಚಕರು ರಿಜಿಸ್ಟರ್ ಪೋಸ್ಟ್ ಮೂಲಕ ಜನರನ್ನು ವಂಚಿಸಲು ಮುಂದಾಗಿದ್ದಾರೆ. ಭಾರತೀಯ ಅಂಚೆಯ ಕೆಂಪು ಬಣ್ಣದ ರಿಜಿಸ್ಟರ್ ಲಕೋಟೆ ನಿಮ್ಮ ಮನೆಗೆ ಬರುತ್ತೆ. ಈ ಲಕೋಟೆ ತೆರೆದರೆ ಒಳಗೆ ಭಾರತ ಸರ್ಕಾರದ ಲಾಂಛನ ಇರುವ ರಿಜಿಸ್ಟರ್ ಕೋಪನ್ ಇರುತ್ತದೆ. ಮತ್ತು ಅಪ್ಲಿಕೇಶನ್ ಫಾರ್ಮ್ ಇರುತ್ತದೆ. ಕೂಪನ್ ಮೇಲೆ ಸ್ಕ್ರ್ಯಾಚ್ ಮಾಡಿ ವಾಹನ ಗೆಲ್ಲಿ ಎಂದು ಇಂಗ್ಲಿಷ್ ಅಕ್ಷರಗಳಲ್ಲಿ ಬರೆದಿರುತ್ತದೆ. ನಂತರ ಸ್ಕ್ರ್ಯಾಚ್ ಮಾಡಿದರೆ, ನೀವು 12 ಲಕ್ಷದ 80 ಸಾವಿರ ಹಣ ಗೆದ್ದಿದ್ದೀರಿ. ಮತ್ತು ಅದರ ಕೆಳಗೆ ಒಂದು ಎಸ್ಎಂಎಸ್ ಕೋಡ್ ಕೂಡ ಇರುತ್ತದೆ.
ವಂಚಕರು ಅದೇ ಕಾರ್ಡಲ್ಲಿ ಸ್ಕ್ಯಾನರ್ ಅಳವಡಿಸಿದ್ದಾರೆ. ಅದನ್ನು ಸ್ಕ್ಯಾನ್ ಮಾಡಿದರೆ ಅಥವಾ ಹೆಲ್ಫ್ ಲೈನ್ ನಂಬರ್ಗೆ ಕರೆ ಮಾಡಿದರೂ ಕೂಡ ನಿಮ್ಮ ಖಾತೆಯಲ್ಲಿನ ಹಣ ವಂಚಕರ ಪಾಲಾಗುತ್ತದೆ. ಹೀಗೆ ಸೈಬರ್ ವಂಚಕರು ಹೊಸ ವಂಚನೆಯ ವಿಧಾನವನ್ನ ಕಂಡುಕೊಂಡಿದ್ದಾರೆ.


























