ಬಂಟ್ವಾಳ : ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಎಂಬವರಿಗೆ ಕಾರ್ಯಾಧ್ಯಕ್ಷ ಜೆ.ಸಿ. ಚಂದ್ರಶೇಖರ್ ರವರು ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ನೋಟೀಸ್ ಜಾರಿ ಮಾಡಿದ್ದು, ಈ ಬಗ್ಗೆ ಬೇಬಿ ಕುಂದರ್ ರವರು ಪಕ್ಷದ ಕಾರ್ಯಾಧ್ಯಕ್ಷರಿಗೆ ಕ್ಷಮೆಕೋರಿ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ಜೂ.15 ರಂದು ಮಂಗಳೂರಿನ ಕದ್ರಿಯ ಗೆಸ್ಟ್ ಹೌಸ್ ನಲ್ಲಿ ಜಿಲ್ಲೆಯ ಎಲ್ಲಾ ಬ್ಲಾಕ್ ಅಧ್ಯಕ್ಷರುಗಳ ಸಭೆಯನ್ನು ಕರೆದಿರುವುದು ಜಿಲ್ಲಾಧ್ಯಕ್ಷರ ಗಮನಕ್ಕೆ ಬಂದು ಅವರು ಕೂಡಲೇ ಸಂಪರ್ಕಿಸಿ ರದ್ದು ಮಾಡುವಂತೆ ಸೂಚಿಸಿರುತ್ತಾರೆ.
ಬ್ಲಾಕ್ ಅಧ್ಯಕ್ಷರು ಕೆಪಿಸಿಸಿ ಅನುಮತಿ ಇಲ್ಲದೆ, ಜಿಲ್ಲಾಧ್ಯಕ್ಷರ ಗಮನಕ್ಕೆ ತರದೆ ಜಿಲ್ಲೆಯ ಎಲ್ಲ ಬ್ಲಾಕ್ ಅಧ್ಯಕ್ಷರನ್ನು ಸಭೆಗೆ ಆಹ್ವಾನಿಸುವುದು ತಪ್ಪು, ಇದು ಪಕ್ಷ ವಿರೋಧಿ ಚಟುವಟಿಕೆಯಾಗಿರುವುದರಿಂದ, ಈ ಬಗ್ಗೆ ತಮ್ಮ ಮೇಲೆ ಯಾಕೆ ಶಿಸ್ತು ಕ್ರಮ ಜರುಗಿಸಬಾರದು ಎಂದು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಎಂಬವರಿಗೆ ಕಾರ್ಯಾಧ್ಯಕ್ಷರ ಜೆ.ಸಿ. ಚಂದ್ರಶೇಖರ್ ರವರು ನೋಟೀಸ್ ನೀಡಿದ್ದರು.
ಜಿಲ್ಲಾಧ್ಯಕ್ಷರಾದ ಹರೀಶ್ ಕುಮಾರ್ ರವರನ್ನು ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ವೈಯಕ್ತಿಕ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಅವರ ಮಾನಹಾನಿ ಮಾಡಿರುವುದನ್ನು ಹಾಗೂ ಕಾಂಗ್ರೆಸ್ ಪಕ್ಷವನ್ನು ಹಿಯಾಳಿಸುವುದನ್ನು ವಾಟ್ಸಪ್ ಮುಖಾಂತರ ತಿಳಿದು ಮನಸ್ಸಿಗೆ ಬೇಸರವಾಗಿ ಈ ವಿಚಾರವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳ ಜೊತೆ ಚರ್ಚಿಸಿ, ಜಿಲ್ಲಾಧ್ಯಕ್ಷರಿಗೆ ಹಾಗೂ ಪಕ್ಷಕ್ಕೆ ಧಕ್ಕೆಯಾಗದಂತೆ ಒಟ್ಟು ಸೇರಿ ತದ ನಂತರ ಚರ್ಚಿಸಿದ ವಿಚಾರವನ್ನು ಜಿಲ್ಲಾಧ್ಯಕ್ಷರ ಗಮನಕ್ಕೆ ತರುವ ಉದ್ದೇಶವಾಗಿತ್ತು. ಯಾವುದೇ ರೀತಿಯ ಪಕ್ಷ ವಿರೋಧಿ ಚಟುವಟಿಕೆಯನ್ನು ಮಾಡದೆ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ಆದೇಶದಂತೆ ಕಾರ್ಯ ನಿರ್ವಹಿಸುತ್ತೇನೆ. ನನ್ನಿಂದ ಪಕ್ಷದ ನಿಯಮದಂತೆ ತಿಳಿದೋ ತಿಳಿಯದೋ ತಪ್ಪಾಗಿದಲ್ಲಿ ಕ್ಷಮೆ ಇರಲಿ ಎಂದು ಬೇಬಿ ಕುಂದರ್ ಅವರು ಪತ್ರದ ಮೂಲಕ ಕ್ಷಮೆ ಕೋರಿದ್ದಾರೆ.






























