ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅಪ್ರಾಪ್ತ ವಯಸ್ಕ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಮಹಿಳಾ ಸಹ ಪ್ರಯಾಣಿಕರು ಹಲ್ಲೆ ನಡೆಸಿದ ಘಟನೆ ಶನಿವಾರ ಶಿರಾಡಿ ಘಾಟ್ ಪರಿಸರದಲ್ಲಿ ನಡೆದಿದ್ದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಧರ್ಮಸ್ಥಳಕ್ಕೆ ಯಾತ್ರೆ ಕೈಗೊಂಡಿದ್ದ ಕುಟುಂಬವೊಂದರ ಬಾಲಕಿ ಕುಳಿತಿದ್ದ ಆಸನದ ಸನಿಹದಲ್ಲೇ ಕುಳಿತ್ತಿದ್ದ ಅನ್ಯ ಕೋಮಿನ ವ್ಯಕ್ತಿ ಬಾಲಕಿಗೆ ಲೈಂಗಿಕ ಹಿಂಸೆ ನೀಡುತ್ತಿರುವುದನ್ನು ಸಹ ಪ್ರಯಾಣಿಕರೋರ್ವರು ವಿಡಿಯೋ ಚಿತ್ರೀಕರಣಮಾಡಿದ್ದರು. ಕಿರುಕುಳ ನೀಡುತ್ತಿದ್ದದನ್ನು ನೊಂದ ಬಾಲಕಿಯು ತನ್ನ ಸಂಬಂಧಿಕರಲ್ಲಿ ತಿಳಿಸಿದ್ದು ವಿಷಯ ತಿಳಿದು ಬಸ್ಸಿನಲ್ಲಿದ್ದ ಮಹಿಳಾ ಪ್ರಯಾಣಿಕರು ಆರೋಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡು ಕೈಯಿಂದ ಹೊಡೆದು ಬುದ್ದಿ ಕಲಿಸಿದ್ದಾರೆ.

ಇತ್ತ ಕಿರುಕುಳ ನೀಡಿದ ವ್ಯಕ್ತಿಯ ಬೆಂಬಲಿಗನೆನ್ನಲಾದ ವ್ಯಕ್ತಿಯು ಬಸ್ಸಿನೊಳಗೆ ಘಟಿಸಿದ ಈ ಘಟನೆಯನ್ನು ಹೊರಗಿನ ವ್ಯಕ್ತಿಗಳಿಗೆ ತಿಳಿಸಿದ್ದು, ಆ ಬಳಿಕ ಕೆಲವರು ಬಸ್ಸಿನೊಳಗೆ ಬಂದು ವಿಡಿಯೋ ಚಿತ್ರೀಕರಣ ಮಾಡಿದ ವ್ಯಕ್ತಿಯನ್ನು ವಿಚಾರಿಸಲು ಮುಂದಾಗಿದ್ದರೆಂದೂ, ಈ ಮಾಹಿತಿ ಪಡೆದ ಪೊಲೀಸರು ವಿಡಿಯೋ ಚಿತ್ರೀಕರಣ ನಡೆಸಿದ ವ್ಯಕ್ತಿಯನ್ನು ಉಪ್ಪಿನಂಗಡಿಯಿಂದ ಆತನ ಮನೆಗೆ ಸುರಕ್ಷಿತವಾಗಿ ತಲುಪಿಸಲು ಅಗತ್ಯ ಕ್ರಮ ಕೈಗೊಂಡರು ಎಂದು ವರದಿಯಾಗಿದೆ.