ಆಂಧ್ರ ಪ್ರದೇಶ : 3ನೇ ತರಗತಿ ವಿದ್ಯಾರ್ಥಿನಿಯನ್ನು 14 ವರ್ಷ ವಯಸ್ಸಿನೊಳಗಿನ ಬಾಲಕರು ಅತ್ಯಾಚಾರಗೈದು ಕೊಲೆ ಮಾಡಿದ ಪ್ರಕರಣ ಆಂಧ್ರ ಪ್ರದೇಶದಲ್ಲಿ ನಡೆದಿತ್ತು. ಜುಲೈ 7ರಂದು ನಂದ್ಯಾಲ ಜಿಲ್ಲೆಯ ಪಗಿದ್ಯಾಲ ಮಂಡಲದ ಮುಚ್ಚುಮರ್ರಿ ಗ್ರಾಮದಲ್ಲಿ ಈ ದುರ್ಘಟನೆ ಬೆಳಕಿಗೆ ಬಂದಿತ್ತು.
ಈ ಪ್ರಕರಣದ ಕುರಿತು ಮೂವರು ಅಪ್ರಾಪ್ತರನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ತನಿಖೆ ನಡೆಸುತ್ತಿದ್ದಾರೆ. ತನಿಖೆ ವೇಳೆ ಆರೋಪಿಗಳು ಹಲವು ಸಂಗತಿ ಬಿಚ್ಚಿಟ್ಟಿದ್ದಾರೆ.
ಬಾಲಕಿಯ ಮೇಲೆ ಅತ್ಯಾಚಾರವೆಸೆಗುವ ಮೊದಲು ಫೋನಿನಲ್ಲಿ ಅಶ್ಲೀಲ ವಿಡಿಯೋ ನೋಡಿದ್ದಾರೆ. ಬಳಿಕ ಆ ದೃಶ್ಯವನ್ನು ಮರುಸೃಷ್ಟಿಸಲು ಬಾಲಕಿಯನ್ನು ಅತ್ಯಾಚಾರ ಮಾಡಿದ್ದಾರೆಂದು ತನಿಖೆ ವೇಳೆ ಅಪ್ರಾಪ್ತರು ಒಪ್ಪಿಕೊಂಡಿದ್ದಾರೆ.
ಅತ್ಯಾಚಾರವೆಸಗಿದ ಬಳಿಕ ಆಕೆಯ ಪೋಷಕರಿಗೆ ತಿಳಿಯುತ್ತದೆ ಎಂದು ಬಾಲಕಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಅಪ್ರಾಪ್ತರು ತಮ್ಮ ಪೋಷಕರಿಗೆ ತಿಳಿಸಿದ್ದಾರೆ. ಈ ವೇಳೆ ಆರೋಪಿಯೊಬ್ಬನ ತಂದೆ ಮತ್ತು ಚಿಕ್ಕಪ್ಪ ಸ್ಥಳಕ್ಕೆ ಬಂದು ಮಗುವಿನ ಮೃತದೇಹವನ್ನು ದ್ವಿಚಕ್ರ ವಾಹನ ಬಳಸಿಕೊಂಡು ಸಾಗಿಸಿದ್ದಾರೆ. ಬಳಿಕ ಕಲ್ಲು ಕಟ್ಟಿ ಕೃಷ್ಣಾ ನದಿಗೆ ಎಸೆದಿದ್ದಾರೆ. ಈ ಸಂಬಂಧ ಅಪ್ರಾಪ್ತನೋರ್ವನ ತಂದೆ ಮತ್ತು ಚಿಕ್ಕಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಘಟನೆ?
ನಂದ್ಯಾಲ ಜಿಲ್ಲೆಯ ಪಗಿದ್ಯಾಲ ಮಂಡಲದ ಮುಚ್ಚುಮರ್ರಿ ಗ್ರಾಮದಲ್ಲಿ 8 ವರ್ಷ ವಯಸ್ಸಿನ ಬಾಲಕಿಯು ತನ್ನ ಮನೆಯಿಂದ ಸ್ನೇಹಿತರೊಡಗೂಡಿ ಆಟವಾಡಲು ಹೋಗಿದ್ದಳು. ಆದರೆ ಸಂಜೆಯಾದರೂ ಮಗಳು ಮನೆಗೆ ಬಾರದ್ದನ್ನು ಗಮನಿಸಿದ ಪೋಷಕರು ಗಾಬರಿಯಾದರು. ಕೊನೆಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಆರೋಪಿಗಳ ಪತ್ತೆ ಹಚ್ಚಿದ ಶ್ವಾನ
ಪೊಲೀಸರು ಬಾಲಕಿಯ ಪೋಷಕರು ನೀಡಿದ ದೂರಿನ ಅನ್ವಯ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ಶ್ವಾನ ದಳವನ್ನು ಬಳಸಿಕೊಂಡು ಆರೋಪಿಗಳನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ. ಶ್ವಾನವು ಕೊಲೆಗೈದ ಆರೋಪಿಗಳ ಮನೆಯ ಬಳಿ ಕರೆದೊಯ್ದಿದೆ.
ಕೊಂದು ರಾಜಕಾಲುವೆಗೆ ಎಸೆದರು
ಪೊಲೀಸರು 6ನೇ ತರಗತಿಯ ಇಬ್ಬರು ಮತ್ತು 7ನೇ ತರಗತಿ ಓರ್ವನನ್ನು ವಶಪಡಿಸಿಕೊಂಡು ಪ್ರಾಥಮಿಕ ತನಿಖೆ ನಡೆಸಿದರು. ವಿಚಾರಣೆ ವೇಳೆ ಮೂವರು ಸೇರಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದು, ಬಳಿಕ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಬಳಿಕ ಮೃತದೇಹವನ್ನು ರಾಜಕಾಲುವೆಗೆ ಎಸೆದಿರೋದಾಗಿ ಹೇಳಿದ್ದಾರೆ.
ಮೂವರು ಬಾಲಕರು ಪ್ರಾರಂಭದಲ್ಲಿ 3ನೇ ತರಗತಿ ಬಾಲಕಿಯನ್ನು ಆಟವಾಡಲು ಬರುವಂತೆ ಒತ್ತಾಯಿಸಿದ್ದಾರೆ. ಬಳಿಕ ಆಕೆಯ ಬಾಯಿ ಮುಚ್ಚಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಳಿಕ ಬಾಲಕಿಯ ಪೋಷಕರಿಗೆ ಹೆದರಿ ಆಕೆಯನ್ನು ಕೊಲೆ ಮಾಡಿದ್ದಾರೆ.
ಪೊಲೀಸರು ಮಂಗಳವಾರದಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಬಾಲಕಿಯ ಮೃತದೇಹಕ್ಕಾಗಿ ಡ್ರೋನ್ ಕ್ಯಾಮೆರಾ, ನೀರೊಳಗೆ ಬಳಸುವ ಕ್ಯಾಮೆರಾದ ಮೂಲಕ ಹುಡುಕಾಡಿದರು ಮೃತದೇಹ ಪತ್ತೆಯಾಗಿಲ್ಲ. ಎನ್ಡಿಆರ್ಎಫ್ ಸಹಾಯದಿಂದ ಮೃತದೇಹಕ್ಕಾಗಿ ಹುಡುಕಾಟ ನಡೆಯುತ್ತಿದೆ.
ಈ ದುರ್ಘಟನೆ ಸಂಬಂಧ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅಪ್ರಾಪ್ತ ಬಾಲಕಿಯ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಿದ್ದಾರೆ.