ಫೇಸ್ ಬುಕ್ ಮೂಲಕ ಪರಿಚಯವಾಗಿ, ಪರಿಚಯ ಪ್ರೀತಿಗೆ ತಿರುಗಿ, ಮಹಿಳೆಯೊಬ್ಬಳು ತನ್ನ ಪ್ರಿಯಕರನ ಭೇಟಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಘಟನೆ ಬೆಳಕಿಗೆ ಬಂದಿದೆ.
25 ವರ್ಷದ ಪಾಕಿಸ್ತಾನಿ ಮಹಿಳೆ ಮೆಹ್ವಿಶ್ ಭಾರತದ ಗಡಿಯನ್ನು ದಾಟಿ, ತನ್ನ ವಿವಾಹಿತ ಪ್ರೇಮಿ ರೆಹಮಾನ್‌ನೊಂದಿಗೆ ಇರಲು ರಾಜಸ್ಥಾನದ ಬಿಕಾನೇರ್ ಜಿಲ್ಲೆಗೆ ಬಂದಿರುವುದು ವರದಿಯಾಗಿದೆ.
ಮೆಹ್ವಿಶ್ ಜುಲೈ 25 ರಂದು ತನ್ನ ಕುಟುಂಬದೊಂದಿಗೆ ಇಸ್ಲಾಮಾಬಾದ್‌ನಿಂದ ವಾಘಾ ಗಡಿಗೆ ಬಂದಿದ್ದು, ಆಕೆಯ ದಾಖಲೆಗಳನ್ನು ಪಾಕಿಸ್ತಾನ ಮತ್ತು ಭಾರತೀಯ ಅಧಿಕಾರಿಗಳು ಪರಿಶೀಲಿಸಿದ ನಂತರ, ಅವರು 45 ದಿನಗಳ ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಪ್ರವೇಶಿಸಿದರು. ರೆಹಮಾನ್‌ನ ಮನೆಯವರು ಆಕೆಯನ್ನು ಬಹಳ ಅದ್ಧೂರಿಯಾಗಿ ಸ್ವಾಗತಿಸಿ ಮನೆಗೆ ಕರೆದುಕೊಂಡು ಬಂದಿದ್ದಾರೆ.
ರೆಹಮಾನ್ ಈಗಾಗಲೇ ಅಂದರೆ 2011ರಲ್ಲಿ ಭದ್ರಾ ಮೂಲದ ಫರೀದಾ ಎಂಬಾಕೆಯನ್ನು ವಿವಾಹವಾಗಿದ್ದು, ಈತನಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ದಂಪತಿ ನಡುವೆ ಮನಸ್ತಾಪ ಉಂಟಾಗಿದ್ದು, ಫರೀದಾ ಹಾಗೂ ಆಕೆಯ ಇಬ್ಬರು ಮಕ್ಕಳು ಪ್ರಸ್ತುತ ತನ್ನ ಪೋಷಕರೊಂದಿಗೆ ವಾಸಿಸುತ್ತಿದ್ದಳು.
ತನ್ನ ಗಂಡನ ಪ್ರಿಯತಮೆ ಪಾಕಿಸ್ತಾನದಿಂದ ಬಂದಿರುವುದನ್ನು ತಿಳಿದು ಫರೀದಾ ಆಕೆಯ ಬಗ್ಗೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದು, ಮೆಹ್ವಿಶ್ ಗೂಢಚಾರಿಯಾಗಿರಬಹುದು ಎಂದು ಆರೋಪಿಸಿ ತನಿಖೆಗೆ ಒತ್ತಾಯಿಸಿದ್ದಾರೆ. ರೆಹಮಾನ್ ಕಾನೂನುಬದ್ಧವಾಗಿ ತನಗೆ ವಿಚ್ಛೇದನ ನೀಡಿಲ್ಲ ಮತ್ತು ಅವನ ಎರಡನೇ ಮದುವೆಯು ಅನಧಿಕೃತವಾಗಿದೆ ಎಂದು ಅವಳು ಹೇಳಿಕೊಂಡಿದ್ದಾಳೆ.