ಮುಕ್ಕೂರು : ಕಡು ಬಡತನದ ನಡುವೆ ಕೂಲಿ ಕೆಲಸ ನಿರ್ವಹಿಸುತ್ತಿದ್ದ ಸುಂದರ ಕಾನಾವು ತನ್ನ ಪರಿಶ್ರಮದಿಂದಲೇ ಪೊಲೀಸ್ ಇಲಾಖೆಗೆ ಸೇರಿ ವೃತ್ತಿ ನಿಷ್ಠೆಯಿಂದ ಎಎಸ್‍ಐ ಹಂತಕ್ಕೆ ತಲುಪಿದ್ದರು. ಅವರು ವೃತ್ತಿ, ವೈಯಕ್ತಿಕ ಬದುಕಿನಲ್ಲಿ ಇನ್ನಷ್ಟು ಉನ್ನತ್ತಿ ಕಾಣುವ ಹೊತ್ತಲ್ಲಿ ಅಕಾಲಿಕವಾಗಿ ನಮ್ಮನ್ನಗಳಿರುವುದು ದುಃಖಕರ ಸಂಗತಿ ಎಂದು ಕಾನಾವು ಕ್ಲಿನಿಕ್ ವೈದ್ಯ, ಪುತ್ತೂರು ಐಎಂಎ ಘಟಕದ ಅಧ್ಯಕ್ಷ ಡಾ.ನರಸಿಂಹ ಶರ್ಮಾ ಕಾನಾವು ಹೇಳಿದರು.
ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮುಕ್ಕೂರು ನ್ಯಾಯಬೆಲೆ ಅಂಗಡಿಯ ಸಭಾಂಗಣದಲ್ಲಿ ನಡೆದ ಪುತ್ತೂರು ನಗರ ಠಾಣಾ ಎಎಸ್‍ಐ ಆಗಿದ್ದ ದಿ.ಸುಂದರ ಕಾನಾವು ಅವರ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ನುಡಿನಮನ ಸಲ್ಲಿಸಿದರು.
ಕಷ್ಟಗಳು ದೂರವಾಗಿ ಬದುಕು ಅರಳುತ್ತಿದ್ದ ಹೊತ್ತಲ್ಲಿ ಸುಂದರ ಅವರು ಅಗಲಿ ಹೋದರು. ಸಣ್ಣ ವಯಸ್ಸಿನಲ್ಲಿ ಅವರ ಹಠಾತ್ ನಿರ್ಗಮನ ಇಡೀ ಕುಟುಂಬಕ್ಕೆ, ಊರಿಗೆ ಆಘಾತವನ್ನು ಉಂಟು ಮಾಡಿದೆ. ಆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡುವ ಜತೆಗೆ ಸುಂದರ ಅವರ ನೆನಪು ಶಾಶ್ವತವಾಗಿರಲಿ ಎಂದರು.
ಪೆರುವಾಜೆ ಗ್ರಾ.ಪಂ. ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಸುಂದರ ಕಾನಾವು ಅವರು ಕೂಲಿ ಕೆಲಸ ಮಾಡುತ್ತಿದ್ದ ಹೊತ್ತಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ದಿ. ಕಾನಾವು ಗೋಪಾಲಕೃಷ್ಣ ಭಟ್ ಅವರು ಇದಕ್ಕೆ ಪ್ರೋತ್ಸಾಹ ನೀಡಿದ್ದರು. ಸತತ ಪ್ರಯತ್ನದ ಫಲವಾಗಿ ಅವರಿಗೆ ಸರಕಾರಿ ಕೆಲಸ ಸಿಕ್ಕಿತ್ತು. ಆದರೆ ಬದುಕಿನ ಸುಖ ಅನುಭವಿಸುವ ಹೊತ್ತಿಗೆ ಅವರ ನಿರ್ಗಮನ ಎಲ್ಲರನ್ನೂ ಶೂನ್ಯವನ್ನಾಗಿಸಿದೆ ಎಂದರು.
ಕಾನಾವು ಕುವೆತ್ತಡ್ಕ ಕುಟುಂಬದ ಪರವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅರಸಿಕೆರೆ ತಾಲೂಕಿನ ಮೇಲ್ವಿಚಾರಕ ಸೀತಾರಾಮ ಕಾನಾವು ಮಾತನಾಡಿ, ಇಡೀ ಕುಟುಂಬಕ್ಕೆ ಪ್ರೇರಕ ಶಕ್ತಿಯಾಗಿದ್ದ ಸುಂದರ ಕಾನಾವು ಅಣ್ಣನ ಸ್ಥಾನದಲ್ಲಿ ನಿಂತು ನಮ್ಮನ್ನು ಮುನ್ನಡೆಸುತ್ತಿದ್ದರು. ಅವರ ನಿಧನದಿಂದ ನಾವು ನಮ್ಮ ಆಧಾರಸ್ತಂಭವನ್ನೇ ಕಳೆದುಕೊಂಡಿದ್ದೇವೆ. ಈ ಹೊತ್ತಲ್ಲಿ ಊರವರು ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಸುಂದರ ಕಾನಾವು ಅವರನ್ನು ನೆನಪು ಮಾಡಿಕೊಂಡಿದ್ದು ಜತೆಗೆ ನಮ್ಮ ಕುಟುಂಬಕ್ಕೂ ಆತ್ಮ ಸ್ಥೈರ್ಯ ತುಂಬಿರುವುದಕ್ಕೆ ಕೃತಜತೆ ಸಲ್ಲಿಸುವೆ ಎಂದರು.
ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ, ವೃತ್ತಿಯಲ್ಲಿ ಎಎಸ್‍ಐ ಆಗಿದ್ದರೂ ಯಾವುದೇ ಅಹಂ ತೋರದೆ ಸರಳ ಸಜ್ಜನಿಕೆಯಿಂದ ಬದುಕಿದವರು ಸುಂದರ ಕಾನಾವು. ಊರಿನ ಬಹುತೇಕರ ಪಾಲಿಗೆ ಅಪರಿಚಿತನಂತೆ ಇದ್ದರು. ತಾನಾಯಿತೂ, ತನ್ನ ಕೆಲಸವಾಯಿತು ಎನ್ನುವ ಮನಸ್ಥಿತಿಯ ಮೃದು ಹೃದಯಿಯನ್ನು ಕಳೆದುಕೊಂಡಿರುವುದು ಊರಿಗೆ ಬಹು ದೊಡ್ಡ ನಷ್ಟ ಎಂದರು.
ಊರ ಪ್ರಮುಖರಾದ ಪ್ರಗತಿಪರ ಕೃಷಿಕರಾದ ಸುಬ್ರಾಯ ಭಟ್ ನೀರ್ಕಜೆ, ಮೋಹನ ಬೈಪಡಿತ್ತಾಯ, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ, ಮುಕ್ಕೂರು-ಪೆರುವಾಜೆ ಜ್ಯೋತಿ ಯುವಕ ಮಂಡಲದ ಮಾಜಿ ಅಧ್ಯಕ್ಷ ಸತ್ಯಪ್ರಸಾದ್ ಕಂಡಿಪ್ಪಾಡಿ, ಮುಕ್ಕೂರು ಅಂಗನವಾಡಿ ಮೇಲುಸ್ತುವಾರಿ ಸಮಿತಿಯ ಹೊನ್ನಪ್ಪ ಗೌಡ ಚಾಮುಂಡಿಮೂಲೆ ಮಾತನಾಡಿ, ಸುಂದರ ಕಾನಾವು ಅವರ ಬದುಕಿನ ಕ್ಷಣಗಳನ್ನು ಮೆಲುಕು ಹಾಕಿ ವೃತ್ತಿಯಲ್ಲಿ ಮುಂಭಡ್ತಿ ಹೊಂದಿದ್ದ ಅವರನ್ನು ಸಮ್ಮಾನಿಸಬೇಕಿದ್ದ ಹೊತ್ತಲ್ಲಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ಮಾಡುವ ಸ್ಥಿತಿ ಬಂದಿರುವುದು ಅತ್ಯಂತ ದುಃಖಕರ ಸಂಗತಿ. ಅವರ ವ್ಯಕ್ತಿತ್ವ, ಆದರ್ಶಗಳನ್ನು ಸ್ಮರಿಸುವ ಜತೆಗೆ ಅವರನ್ನು ಸದಾ ನೆನಪಿನಲ್ಲಿಡುವ ಪ್ರಯತ್ನ ಮಾಡೋಣ. ಕಾನಾವು ಕುವೆತ್ತಡ್ಕದ ಕುಟುಂಬದ ಜತೆಗೆ ನಾವೆಲ್ಲರೂ ಇದ್ದೇವೆ ಎಂದರು.
ಕಾನಾವು ಕುವೆತ್ತಡ್ಕ ಕುಟುಂಬದ ಹಿರಿಯರಾದ ಕುಂಞ ದೀಪ ಬೆಳಗಿಸಿದರು. ಪ್ರಗತಿಪರ ಕೃಷಿಕ ರಾಮಚಂದ್ರ ಕೋಡಿಬೈಲು, ವೈದ್ಯ ಡಾ.ರಾಮಕಿಶೋರ್ ಕಾನಾವು, ವಿವಿಧ ಸಂಘಟನೆಗಳ ಪರವಾಗಿ ಮುಕ್ಕೂರು ಸ.ಹಿ.ಪ್ರಾ.ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಧಾಕರ ರೈ ಕುಂಜಾಡಿ, ಎಸ್‍ಡಿಎಂಸಿ ಅಧ್ಯಕ್ಷ ಜಯಂತ ಕುಂಡಡ್ಕ, ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ತಾರಾನಾಥ ಕುಂಡಡ್ಕ, ಕುಂಡಡ್ಕ ನೇಸರ ಯುವಕ ಮಂಡಲದ ಕಾರ್ಯದರ್ಶಿ ರಾಮಚಂದ್ರ ಚೆನ್ನಾವರ, ಮುಕ್ಕೂರು ಶ್ರೀ ಶಾರದೋತ್ಸವ ಸಮಿತಿ ಮಾಜಿ ಅಧ್ಯಕ್ಷ ಕಿರಣ್ ಚಾಮುಂಡಿಮೂಲೆ, ಪೆರುವಾಜೆ-ಮುಕ್ಕೂರು ಮೊಗೇರ ಗ್ರಾಮ ಸಮಿತಿ ಮಾಜಿ ಅಧ್ಯಕ್ಷ ರಮೇಶ್ ಕಾನಾವು, ಅಂಗನವಾಡಿ ಕಾರ್ಯಕರ್ತೆ ರೂಪಾ ಸೇರಿದಂತೆ ಹಲವಾರು ಊರವರು, ಕಾನಾವು ಕುವೆತ್ತಡ್ಕದ ಕುಟುಂಬಸ್ಥರು ಉಪಸ್ಥಿತರಿದ್ದರು.