ಪುತ್ತೂರು : ಕೇರಳದ ವಯನಾಡಿನಲ್ಲಿ ನಡೆದ ಭೂಕುಸಿತ ದುರಂತದ ಘಟನೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣವಾದ ವಾಟ್ಸಪ್‌ನಲ್ಲಿ ಕೋಮುದ್ವೇಷ ಭಾವನೆ ಹುಟ್ಟಿಸುವ ಮಾದರಿಯಲ್ಲಿ ಪೋಸ್ಟ್ ಮಾಡಿ ವಿನಿಮಯ ಮಾಡಿಕೊಂಡ ಆರೋಪದಲ್ಲಿ ಪೊಲೀಸರು ಮೂವರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಗರ ಪೊಲೀಸ್ ಠಾಣೆ ಎಸ್‌ಐ ಆಂಜನೇಯ ರೆಡ್ಡಿ ಅವರು ಈ ಕುರಿತು ದೂರು ನೀಡಿದ್ದರು.
ಅಖಿಲ್, ಶರತ್ ಮಾಡಾವು, ಪ್ರವೀಣ್ ಪಾರೆ ಮತ್ತು ಇತರರ ವಿರುದ್ದ ಸೆಕ್ಷನ್ 353(2)ಬಿಎನ್ಎಸ್ 2023 ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇತ್ತೀಚೆಗೆ ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದ ದುರಂತದಲ್ಲಿ ಸಾವಿಗೀಡಾದವರನ್ನು ಉದ್ದೇಶಿಸಿ ಪುತ್ತೂರು ಡಾಕ್ಟರ್ಸ್, ಇನ್ನಿತರ ಗ್ರೂಪ್ ಗಳಲ್ಲಿ ಒಂದು ಸಮುದಾಯದ ವಿರುದ್ದ ಪೋಸ್ಟ್ ಮಾಡಿ, ವಿನಿಮಯ ಮಾಡಿಕೊಂಡಿರುವುದು ಧರ್ಮದ ಮಧ್ಯೆ, ಕೋಮುದ್ವೇಷ ಭಾವನೆ ಹುಟ್ಟಿಸುವ, ಕೋಮುಸಾಮರಸ್ಯಕ್ಕೆ ಧಕ್ಕೆ ಬರುವಂತಹ, ಸಮುದಾಯಗಳ ನಡುವೆ ವೈಮನಸ್ಸು ಉಂಟು ಮಾಡಿ ಸಾರ್ವಜನಿಕ ನೆಮ್ಮದಿಗೆ ಭಂಗ ತರುವ ಸಾಧ್ಯತೆಗಳು ಇರುವುದರಿಂದ ಈ ಕುರಿತು ಕಾನೂನು ಕ್ರಮಕೈಗೊಳ್ಳಬೇಕಾಗಿ ಎಸ್.ಐ. ಆಂಜನೇಯ ರೆಡ್ಡಿಯವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.