ಮಂಗಳೂರು : ದೇಶದ ಎಲ್ಲೆಡೆ ಭಾರೀ ಸುದ್ದಿಯಾಗಿದ್ದ ಮಂಗಳೂರಿನ ಹೋಂ ಸ್ಟೇ ದಾಳಿ ಪ್ರಕರಣದ ಎಲ್ಲಾ ಆರೋಪಿಗಳು ಖುಲಾಸೆಗೊಂಡಿದ್ದಾರೆ.
ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರ (ಆ.06) ತೀರ್ಪು ನೀಡಿದೆ.
2012ರ ಜುಲೈ 28ರಂದು ಮಂಗಳೂರಿನ ಪಡೀಲ್ ಬಳಿಯ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ಮೇಲೆ ದಾಳಿ ನಡೆದಿತ್ತು. ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಈ ದಾಳಿ ನಡೆಸಿದ್ದರು ಎಂದು ಅಪಾದಿಸಲಾಗಿತ್ತು. ಬರ್ತ್ ಡೇ ಪಾರ್ಟಿಯಲ್ಲಿ ನಿರತರಾಗಿದ್ದ ಯುವಕ-ಯುವತಿಯರ ಮೇಲೂ ತಂಡ ದಾಳಿ ಮಾಡಿತ್ತು ಎಂದು ಮಂಗಳೂರು ಗ್ರಾಮಾಂತರ ಪೊಲೀಸರು 44 ಆರೋಪಿಗಳ ವಿರುದ್ದ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿತ್ತು. ಒಟ್ಟು 44 ಆರೋಪಿಗಳ ಪೈಕಿ ಮೂವರು ಸಾವನ್ನಪ್ಪಿದ್ದರು. ಓರ್ವನ ಮೇಲಿನ ಪ್ರಕರಣ ಕೈಬಿಡಲಾಗಿತ್ತು. ಹೋಂ ಸ್ಟೇ ದಾಳಿ ಪ್ರಕರಣ ಭಾರೀ ಸಂಚಲನ ಮೂಡಿಸಿತ್ತು.
ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಗಳು ಖುಲಾಸೆಗೊಂಡಿದ್ದು, ನ್ಯಾಯಾಧೀಶ ಕಾಂತರಾಜು ಆದೇಶ ನೀಡಿದ್ದಾರೆ.
ಈ ಪ್ರಕರಣದಲ್ಲಿ ಒಟ್ಟು 44 ಮಂದಿ ಪೈಕಿ ಮೂವರು ಸಾವನ್ನಪ್ಪಿದ್ದು, ಓರ್ವನನ್ನು ಪ್ರಕರಣದಿಂದ ನ್ಯಾಯಾಲಯ ಕೈಬಿಟ್ಟಿತ್ತು. ಇಂದು ಉಳಿದ 40 ಆರೋಪಿಗಳನ್ನ ದೋಷ ಮುಕ್ತಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ.
ವಕೀಲರಾದ ಶಂಭುಶರ್ಮಾ, ಕಿಶೋರ್ ಕುಮಾರ್ ಅವರ ತಂಡ ಆಪಾದಿತರ ಪರ ವಾದ ಮಂಡಿಸಿದ್ದರು.