ಬೆಳ್ತಂಗಡಿ : ಬಹು ನಿರೀಕ್ಷಿತ ಪುಂಜಾಲಕಟ್ಟೆ- ಚಾರ್ಮಾಡಿ ರಾ.ಹೆ.-73ರ ಕಾಮಗಾರಿ ಗುತ್ತಿಗೆದಾರ ಡಿ.ಪಿ. ಜೈನ್ ನಷ್ಟವಾಗಿದೆ ಎಂದು ಹೇಳಿ ಅರ್ಧದಲ್ಲೇ ಕಾಮಗಾರಿಯಿಂದ ಹಿಂದೆ ಸರಿದ ಕಾರಣ ಮುಗ್ರೋಡಿ ಕಂಪೆನಿಗೆ ಹೆಚ್ಚುವರಿಗೆ ಕಾಮಗಾರಿ ಹೊಣೆಯನ್ನು ನೀಡಲಾಗಿದ್ದು, ಸಂಸದ ಬ್ರಿಜೇಶ್ ಚೌಟ ಹಾಗೂ ಶಾಸಕ ಹರೀಶ್ ಪೂಂಜ ಸಮ್ಮುಖದಲ್ಲಿ ಕಾಮಗಾರಿಗೆ ಮರು ಚಾಲನೆ ನೀಡಲಾಯಿತು.
ಕಾಶಿಬೆಟ್ಟು ಬಳಿ ಚಾಲನೆ ನೀಡಿ ಮಾತನಾಡಿದ ಸಂಸದರು, ಜಿಲ್ಲೆಯಲ್ಲಿ ಈ ಹಿಂದೆ ಅನುಭವ ಇಲ್ಲದ ಗುತ್ತಿಗೆದಾರರು ಕಾಮಗಾರಿ ನಡೆಸಿದ್ದರು. ಈಗ ಅನುಭವಿ ಗುತ್ತಿಗೆದಾರರ ವ್ಯವಸ್ಥೆ ಮಾಡಲಾಗಿದೆ. ರಸ್ತೆಯ ಹೊಂಡಗಳನ್ನು ಮುಚ್ಚುವ ಕೆಲಸಕ್ಕೆ ಚಾಲನೆ ನೀಡಲಾಗಿದೆ.
35 ಕಿ.ಮೀ. ವ್ಯಾಪ್ತಿಯ ಹೆದ್ದಾರಿಯಲ್ಲಿ ಸುಮಾರು 7 ಸ್ಥಳಗಳಲ್ಲಿ ಸಂಪೂರ್ಣ ಕೆಟ್ಟು ಹೋಗಿದ್ದು, ಮೊದಲ ಹಂತದಲ್ಲಿ ತತ್‌ಕ್ಷಣ ಈ ಸ್ಥಳಗಳಲ್ಲಿ ಕಾಮಗಾರಿ ನಡೆಯಲಿದೆ. ಬಳಿಕ ಇತರ ಕಾಮಗಾರಿಗಳು ಮುಂದುವರಿಯಲಿವೆ ಎಂದರು.
ಶಾಸಕ ಹರೀಶ್ ಪೂಂಜ ಮಾತನಾಡಿ, ಸಂಸದ ಬ್ರಿಜೇಶ್ ಚೌಟ ಅವರು ಸಮಸ್ಯೆಯನ್ನು ಅರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಹೆದ್ದಾರಿ ಇಲಾಖೆ ಅಧಿಕಾರಿಗಳಲ್ಲಿ ಮಾತನಾಡಿ ಸುವ್ಯವಸ್ಥೆ ಕಲ್ಪಿಸಿದ್ದಾರೆ. ಇನ್ನುಮುಂದೆ ಹೆದ್ದಾರಿ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದರು.
ಪುಂಜಾಲಕಟ್ಟೆ – ಚಾರ್ಮಾಡಿ ಅಭಿವೃದ್ಧಿ ಕಾಮಗಾರಿಗೆ ಭೌಗೋಳಿಕ ಹಿನ್ನೆಲೆಯಲ್ಲಿ ಕೆಲಸ ನಿರ್ವಹಿಸಲು ಸಮಸ್ಯೆ ಎದುರಾಗಿದೆ. ಆದ್ದರಿಂದ ಶಾಸಕ ಹರೀಶ್ ಪೂಂಜ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿಯೊಂದಿಗೆ ಸಭೆ ನಡೆಸಿ ಅನೇಕ ಯೋಜನೆ ರೂಪಿಸಲಾಗಿದೆ.
ರಾಜ್ಯ ಮತ್ತು ಕೇಂದ್ರ ಸರಕಾರದ ಜತೆಗೂ ಚರ್ಚಿಸಲಾಗಿದೆ. ಇದರ ಒಂದು ಭಾಗವಾಗಿ ಡಿ.ಪಿ. ಜೈನ್ ಅವರ ಮೂಲಕ, ಅವರ ಹೆಸರಲ್ಲೇ ಮುಗ್ರೋಡಿ ಕಂಪೆನಿ ಇನ್ನು ಮುಂದೆ ಹೆದ್ದಾರಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.


























