ಮಂಗಳೂರು : ರಿಕ್ಷಾ ಚಲಾಯಿಸುತ್ತಿದ್ದ ವೇಳೆಯೇ ಚಾಲಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಚಾಲಕನಿಲ್ಲದೆ ಮುಂದೆ ಚಲಿಸಿದ ರಿಕ್ಷಾವು ರಿಕ್ಷಾಪಾರ್ಕಿನಲ್ಲಿದ್ದ ಮತ್ತೊಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದು ನಿಂತ ಪರಿಣಾಮ ಪ್ರಯಾಣಿಕ ಮಹಿಳೆಯರಿಬ್ಬರು ಪವಾಡ ಸದೃಶ ಪಾರಾದ ಘಟನೆ ಕೋಟೆಕಾರಿನಲ್ಲಿ ನಡೆದಿದೆ.
ಉಳ್ಳಾಲ ಧರ್ಮನಗರದ ನಿವಾಸಿ ಅಬ್ದುಲ್ ಮಜೀದ್ (44) ಹೃದಯಾಘಾತದಿಂದ ಸಾವನ್ನಪ್ಪಿದ ರಿಕ್ಷಾ ಚಾಲಕ.

ಮಜೀದ್ ನಿನ್ನೆ ಮಧ್ಯಾಹ್ನ 12 ಗಂಟೆಯ ವೇಳೆ ಧರ್ಮನಗರದಿಂದ ಸಂಬಂಧಿಕ ಮಹಿಳೆಯರಿಬ್ಬರನ್ನ ತನ್ನ ಆಟೋ ರಿಕ್ಷಾದಲ್ಲಿ ಕುಳ್ಳಿರಿಸಿ ಒಂಭತ್ತುಕೆರೆ, ಸೋಮೇಶ್ವರ ಮಾರ್ಗವಾಗಿ ಕೋಟೆಕಾರು ಬೀರಿಗೆ ಸಾಗುತ್ತಿದ್ದ ವೇಳೆ ಕೋಟೆಕಾರು ಹೆದ್ದಾರಿ ಬಳಿಗೆ ತಲುಪುತ್ತಿದ್ದಂತೆ ಹೃದಯಾಘಾತವಾಗಿ ರಸ್ತೆಗೆಸೆಯಲ್ಪಟ್ಟಿದ್ದಾರೆ.
ಚಾಲಕನಿಲ್ಲದ ರಿಕ್ಷಾವು ಮುಂದೆ ಚಲಿಸಿದ್ದು, ಅದೃಷ್ಟವಶಾತ್ ಅಲ್ಲೇ ಆಟೋ ಪಾರ್ಕಿನಲ್ಲಿ ನಿಂತಿದ್ದ ನಿತ್ಯಾನಂದ ಎಂಬವರ ರಿಕ್ಷಾಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಆಟೋ ಕೊಂಚ ಮುಂದೆ ಚಲಿಸಿ ಹೆದ್ದಾರಿಗೆ ನುಗ್ಗುತ್ತಿದ್ದರೆ ಪ್ರಯಾಣಿಕ ಮಹಿಳೆಯರಿಬ್ಬರ ಪ್ರಾಣಕ್ಕೆ ಕಂಟಕ ಎದುರಾಗಲಿತ್ತೆನ್ನಲಾಗಿದೆ.
ಪ್ರಯಾಣಿಕ ಮಹಿಳೆಯರಲ್ಲಿ ಓರ್ವರು ಅನಾರೋಗ್ಯದಿಂದ ಬಳಲುತ್ತಿದ್ದು, ಆಕೆಯನ್ನ ವೈದ್ಯರ ಕ್ಲಿನಿಕ್ ಗೆ ಬಿಡಲು ಮಜೀದ್ ತೆರಳಿದ್ದರಂತೆ.
ಮಜೀದ್ ಶ್ರಮಜೀವಿಯಾಗಿದ್ದು, ಹಗಲಿರುಳು ರಿಕ್ಷಾ ಚಲಾಯಿಸಿ ಸಂಪಾದನೆ ಮಾಡಿ ಕುಟುಂಬಕ್ಕೆ ಆಧಾರವಾಗಿದ್ದರು. ದಿನ ನಿತ್ಯವೂ ಬೆಳಗ್ಗೆ ಮತ್ತು ಸಾಯಂಕಾಲದ ವೇಳೆ ರಿಕ್ಷಾದಲ್ಲಿ ಮಕ್ಕಳ ಸ್ಕೂಲ್ ಟ್ರಿಪ್ ಮಾಡಿ ಬದುಕು ಸಾಗಿಸುತ್ತಿದ್ದರು.
ಮೃತರು ಪತ್ನಿ, ಒಂದು ಗಂಡು, ಮತ್ತೊಂದು ಹೆಣ್ಣು ಮಗುವನ್ನ ಅಗಲಿದ್ದಾರೆ.



























