ಬೆಂಗಳೂರು : ಸಿಟಿಯಲ್ಲಿ ಕಳ್ಳತನ ಮಾಡಿ, ಬಳಿಕ ಕದ್ದ ಆಭರಣಗಳೊಂದಿಗೆ ಕಾಡಿಗೆ ಎಸ್ಕೇಪ್ ಆಗುತ್ತಿದ್ದ ಐನಾತಿ ಕಳ್ಳನೊಬ್ಬನನ್ನ ಬೆಂಗಳೂರಿನ ಗಿರಿನಗರ ಪೊಲೀಸರು ಬಂಧಿಸಿದ್ದಾರೆ.
ಕುಖ್ಯಾತ ಕಳ್ಳ ನರಸಿಂಹ ರೆಡ್ಡಿ ಎಂಬಾತ ಸುಮಾರು 50ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಇತ್ತೀಚೆಗೆ ಗಿರಿನಗರ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡಿ, ಕದ್ದ ಆಭರಣ ಸಮೇತ ಕಾಡಿಗೆ ಎಸ್ಕೇಪ್ ಆಗಿದ್ದ.
ನೆಲಮಂಗಲ ಬಳಿಯ ಗುಡೇಮಾರನಹಳ್ಳಿ ಹಾಗೂ ಕೃಷ್ಣಗಿರಿಯ ಫಾರೆಸ್ಟ್ ಎಂಬ ಎರಡು ಕಾಡುಗಳನ್ನ ಇತ ತನ್ನ ಆವಾಸಸ್ಥಾನ ಮಾಡಿಕೊಂಡಿದ್ದ. ಕಾಡಿನ ಬಂಡೆಗಳ ಮೇಲೆ ಮಲಗುತ್ತಿದ್ದ ಆರೋಪಿ, ಪೊಲೀಸರು ಬೆನ್ನತ್ತಿದರೆ ಅವರು ನನ್ನ ಹಿಂದೆ ಬರಬೇಕು, ಬೆನ್ನಟ್ಟಬೇಕು ಎಂದು ಚಾಲೆಂಜ್ ಮಾಡಿ ಹೋಗುತ್ತಿದ್ದ. ಹೀಗೆ ಗುಡೇಮಾರನಹಳ್ಳಿ ಕಾಡಿನಲ್ಲಿದ್ದ ವೇಳೆ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ನರಸಿಂಹ ರೆಡ್ಡಿ ನೆಲಮಂಗಲದ ಸೋಲೂರು ಮೂಲದವನು. ಒಂಟಿ ಮನೆಗಳು, ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಈತ, ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳತನ ಮಾಡಿ, ಅದೇ ದುಡ್ಡಲ್ಲಿ ಕಾರು ಖರೀದಿ ಮಾಡ್ತಿದ್ದ. ಬಳಿಕ ಕಾರಿನಲ್ಲಿ ಓಡಾಡುತ್ತಿದ್ದ ನರಸಿಂಹ, ಕಾಡಿನ ಬಂಡೆ ಕೆಳಗೆ ಕದ್ದ ಚಿನ್ನಾಭರಣ ಹೂತಿಟ್ಟಿದ್ದ. ಇದೀಗ ಖತರ್ನಾಕ್ ಕಳ್ಳನನ್ನ ಪೊಲೀಸರು ಬಂಧಿಸಿದ್ದು, ಆತನಿಂದ 70 ಲಕ್ಷ ರೂ. ಮೌಲ್ಯದ ಒಂದು ಕೆ.ಜಿ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



























