ಬೆಳ್ತಂಗಡಿ : ತಾಲೂಕಿನ ಸವಾಣಾಲು ಗ್ರಾಮದ ಗ್ರಾಮಸ್ಥರು ಬಿಜೆಪಿ ಶಾಸಕ ಹರೀಶ್ ಪೂಂಜಾ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇತ್ತೀಚಿಗೆ ಸುರಿದ ಭಾರೀ ಮಳೆಗೆ ಬೆಳ್ತಂಗಡಿ ತಾಲೂಕಿನ ಸವಾಣಾಲು ಗ್ರಾಮದ ಪಿಲಿಕಲ ರಸ್ತೆ ಬಿರುಕು ಬಿಟ್ಟು ವಾಹನ ಸಂಚಾರ ಹಾಗೂ ಜನರ ಓಡಾಟಕ್ಕೆ ಅಡಚಣೆ ಉಂಟಾಗಿತ್ತು. ಇಲ್ಲಿಗೆ ಭೇಟಿ ನೀಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರನ್ನು ಸ್ಥಳೀಯ ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. ಮಳೆ ಹಾನಿ ಪ್ರದೇಶಕ್ಕೆ ತಡವಾಗಿ ಭೇಟಿ ನೀಡಿದ್ದಕ್ಕೆ ಆಕ್ರೋಶ ಹೊರ ಹಾಕಿದ್ದಾರೆ. ಆದರೆ ಈ ವೇಳೆ ಕ್ಷೇತ್ರದ ಜನರ ಜೊತೆಗೂ ಶಾಸಕ ಹರೀಶ್ ಪೂಂಜಾ ಕಿರಿಕ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಪ್ರಶ್ನೆ ಮಾಡಿದ ಜನರಿಗೆ ದೇವರ ಹೆಸರಲ್ಲಿ ಪೂಂಜಾ ಬ್ಲ್ಯಾಕ್ಮೇಲ್!
‘MLAಗೆ ಏಕೆ ತಡವಾಗಿ ಬಂದೆ ಎಂದು ಪ್ರಶ್ನೆ ಮಾಡುವ ಹಕ್ಕು ನಿಮಗಿಲ್ಲ’ ಆ ರೀತಿ ಪ್ರಶ್ನೆ ಮಾಡಿದ್ರೆ ದೇವರ ಮೇಲೆ ಇಡುತ್ತೇನೆ ಎಂದು ಪ್ರಶ್ನೆ ಮಾಡಿದ ಜನರಿಗೆ ದೇವರ ಹೆಸರಲ್ಲಿ ಹರೀಶ್ ಪೂಂಜಾ ಬ್ಲ್ಯಾಕ್ಮೇಲ್ ಮಾಡಿದ್ದಾರೆನ್ನಲಾಗಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವರ್ತನೆಗೆ ಗ್ರಾಮದ ಜನರು ಆಕ್ರೋಶ ಹೊರ ಹಾಕಿದ್ದಾರೆ.
ತೀವ್ರ ಮಳೆ ಹಾನಿ ಆದ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜಾ ಅನುಪಸ್ಥಿತರಿದ್ದರು. ಆದರೆ ಈಗ ಮಳೆ ಕಡಿಮೆಯಾದ ಬಳಿಕ ಸವಾಣಾಲು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಹೀಗಾಗಿ ತಡವಾಗಿ ಬಂದಿದ್ದಕ್ಕೆ ಶಾಸಕ ಹರೀಶ್ ಪೂಂಜಾಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದರು. ಶಾಸಕನನ್ನ ಪ್ರಶ್ನೆ ಮಾಡಿದ ಗ್ರಾಮಸ್ಥರಿಗೆ ಅವಾಚ್ಯವಾಗಿ ಶಾಸಕ ಪೂಂಜಾ ನಿಂದಿಸಿದ್ದಾರೆ ಎನ್ನಲಾಗುತ್ತಿದೆ.
ಈ ವೇಳೆ ಗ್ರಾಮಸ್ಥರು, ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದೆ. ಆಕ್ರೋಶ ತೀವ್ರಗೊಳ್ತಿದ್ದಂತೆ ಶಾಸಕ ಪೂಂಜಾ ಸ್ಥಳದಿಂದ ತೆರಳಿದರು.



























