ಪುತ್ತೂರು : ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಬಂದ ಆಟೋ ರಿಕ್ಷಾದ ಕುರಿತು ಕಾರೊಂದರಲ್ಲಿದ್ದವರು ವಿಚಾರಿಸುತ್ತಿದ್ದ ವೇಳೆ ಘಟನೆಗೆ ಸಂಬಂಧವೇ ಇಲ್ಲದ ಮಹಿಳೆಯೊಬ್ಬರು ಪಕ್ಕದ ಅಂಗಡಿಯಿಂದ ಹೊರ ಬಂದು ಕಾರಿನಲ್ಲಿದ್ದ ಓರ್ವನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ನಿನ್ನೆ ರಾತ್ರಿ ಪುತ್ತೂರು ಕೋರ್ಟ್ ರಸ್ತೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಬೆಟ್ಟಂಪಾಡಿ ಮೂಲದ ನಾಲ್ವರು ಹಿಂದೂ ಕಾರ್ಯಕರ್ತರು ಪುತ್ತೂರು ಮೊಸರುಕುಡಿಕೆ ಉತ್ಸವಕ್ಕೆ ಮಡಿಕೆಯನ್ನು ತಂದು ಪುತ್ತೂರು ಕಾರ್ಯಾಲಯದಲ್ಲಿ ಇರಿಸಿ ಹಿಂತಿರುಗಿ ಮನೆ ಕಡೆಗೆ ಹೋಗಲೆಂದು ಕೋರ್ಟ್ ರಸ್ತೆಯಿಂದ ಮುಖ್ಯ ರಸ್ತೆಗೆ ಕಾರಿನಲ್ಲಿ ಬರುತ್ತಿದ್ದ ವೇಳೆ ಏಕಮುಖ ರಸ್ತೆಯಲ್ಲಿ ವಿರುದ್ದ ದಿಕ್ಕಿನಿಂದ ಅವರ ಕಾರಿಗೆ ಎದುರಾಗಿ ಆಟೋ ರಿಕ್ಷಾವೊಂದು ಬರುತ್ತಿದ್ದುದನ್ನು ವಿಚಾರಿಸುತ್ತಿದ್ದರೆನ್ನಲಾಗಿದೆ.
ಈ ವೇಳೆ ಅದೇ ರಸ್ತೆ ಪಕ್ಕದ ಅಂಗಡಿಯಿಂದ ಹೊರ ಬಂದ ಮುಸ್ಲಿಂ ಮಹಿಳೆಯೋರ್ವರು ಕಾರಿನಲ್ಲಿದ್ದ ಓರ್ವನಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಈ ವೇಳೆ ರಿಕ್ಷಾ ಚಾಲಕನೂ ಪರಾರಿಯಾಗಿರುವುದಾಗಿ ಕಾರಿನಲ್ಲಿದ್ದವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

























