ಕಡಬ : ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ, ಸವಾರ ಮೃತಪಟ್ಟ ಘಟನೆ ಇಚ್ಲಂಪಾಡಿ ನೂಜಿಬಾಳ್ತಿಲದಲ್ಲಿ ನಡೆದಿದೆ.
ಮೃತ ಸವಾರನನ್ನು ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿ ಗ್ರಾಮದ ಗುತ್ಯಪ್ಪ ಎಂಬವರ ಪುತ್ರ ದೇವರಾಜ್ (22) ಎಂದು ಗುರುತಿಸಲಾಗಿದೆ.
ದೇವರಾಜ್ ಸ್ನೇಹಿತರೊಂದಿಗೆ ಬೈಕಿನಲ್ಲಿ ಧರ್ಮಸ್ಥಳ ಯಾತ್ರೆ ಮುಗಿಸಿ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ವೇಳೆ ನೂಜಿಬಾಳ್ತಿಲ ಬೆಥನಿ ಕಾಲೇಜಿನ ಮುಂಭಾಗದಲ್ಲಿ ಎದುರಿನಿಂದ ತೆರಳುತ್ತಿದ್ದ ಖಾಸಗಿ ಬಸ್ಸನ್ನು ಓವರ್ಟೇಕ್ ಮಾಡುವ ವೇಳೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಇನ್ನೋವಾ ವಾಹನವನ್ನು ನೋಡಿ ಬ್ರೇಕ್ ಹಾಕಿದ್ದಾರೆ ಎನ್ನಲಾಗಿದೆ.
ಈ ವೇಳೆ ಬೈಕ್ ಸ್ಕಿಡ್ ಆಗಿ ಗಂಭೀರ ಗಾಯಗೊಂಡ ದೇವರಾಜ್ ಪುತ್ತೂರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

























