ಹಿಂದೆಲ್ಲಾ ಪುರುಷ ಪ್ರಧಾನ ಸಮಾಜದಲ್ಲಿ ಪತಿ ಹಾಗೂ ಅತ್ತೆ ಮನೆಯವರು ಮದುವೆಯಾಗಿ ಬಂದ ಹೆಣ್ಣಿಗೆ ವಿಪರೀತ ಹಿಂಸೆ ಮತ್ತು ಕಿರುಕುಳವನ್ನು ನೀಡುತ್ತಿದ್ದರು. ಇವರುಗಳ ಕಾಟ ತಾಳಲಾರದೆ ಹೆಣ್ಣು ತವರು ಮನೆಗೆ ಹೋಗುವಂತಹ ಅಥವಾ ಅತ್ಮಹತ್ಯೆ ಮಾಡಿಕೊಳ್ಳುವಂತಹ ಘಟನೆಗಳು ನಡೆಯುತ್ತಿದ್ದವು. ಆದ್ರೆ ಈಗ ಕಾನೂನಿನಲ್ಲಿ ಮಹಿಳೆಯರಿಗೆ ವಿಶೇಷ ನ್ಯಾಯ ಸವಲತ್ತುಗಳನ್ನು ನೀಡಲಾಗಿದ್ದು, ಕೆಲವರು ಇದನ್ನೇ ದುರುಪಯೋಗ ಪಡಿಸಿಕೊಂಡು ತಮ್ಮ ಪತಿಗೆ ಕಿರುಕುಳ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಹೀಗೆ ಪತ್ನಿಯ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಕೆಲವು ಘಟನೆಗಳು ಈ ಹಿಂದೆಯೂ ನಡೆದಿದೆ. ಅಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಹೆಂಡತಿ ಮತ್ತು ಅತ್ತೆಯ ಕಾಟವನ್ನು ತಾಳಲಾರದೆ ಪತಿಯೇ ಸೆಲ್ಫಿ ವಿಡಿಯೋ ಮಾಡಿ ನೇಣಿಗೆ ಶರಣಾಗಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಘಟನೆ ನಡೆದಿದ್ದು, 38 ವರ್ಷದ ಜಗಜಿತ್ ಸಿಂಗ್ ರಾಣಾ ಎಂಬ ವ್ಯಕ್ತಿ ಪತ್ನಿ ಮತ್ತು ಅತ್ತೆಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಜೀವನದಲ್ಲಿ ಎಲ್ಲವನ್ನೂ ಮಾಡಿ ಆದ್ರೆ ದಯವಿಟ್ಟು ಯಾರು ಕೂಡಾ ಮದುವೆಯಾಗುವ ನಿರ್ಧಾರವನ್ನು ಮಾಡಬೇಡಿ ಎಂದು ನೋವಿನಿಂದ ಸೆಲ್ಫಿ ವಿಡಿಯೋ ಮಾಡಿ ಅದನ್ನು ವಾಟ್ಸಾಪ್ ಅಲ್ಲಿ ಶೇರ್ ಮಾಡಿದ್ದಾರೆ. ನಂತರ ಫ್ಲಾಟ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಅಕ್ಕಪಕ್ಕದ ಫ್ಲಾಟ್‌ನವರು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದು, ತಕ್ಷಣ ಸ್ಥಳಕ್ಕಾಗಮಿಸಿ ಮೃತದೇಹವನ್ನು ಹೊರತೆಗೆದಿದ್ದಾರೆ. ಮತ್ತು ತನಿಖೆ ವೇಳೆ ಅವರಿಗೆ ಎರಡು ವಿಡಿಯೋಗಳು ಪತ್ತೆಯಾಗಿವೆ. ಆ ವಿಡಿಯೋದಲ್ಲಿ ನನ್ನ ಆಸ್ತಿಯಲ್ಲಿ ಅವರ್ಯಾರಿಗೂ ಪಾಲನ್ನು ಕೊಡಬೇಡಿ ಮತ್ತು ನನ್ನ ಮೃತದೇಹವನ್ನು ಕೂಡಾ ಅವರಿಗೆ ತೋರಿಸಬೇಡಿ ಎಂದು ಕೋರಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವ ಮೊದಲು ಮೃತ ವ್ಯಕ್ತಿಯ ಕುಟುಂಬದವರು ಲಿಖಿತ ದೂರನ್ನು ನೀಡಲು ಪೊಲೀಸರು ಕಾಯುತ್ತಿದ್ದಾರೆ.