ಉಡುಪಿ : ರಾಜ್ಯಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೂ ಹಿಜಾಬ್ ವಿವಾದ ತಟ್ಟಿದೆ. ಹಿಜಾಬ್ ಪರ ಹೋರಾಟಗಾರರಿಂದ ರಾಜ್ಯಮಟ್ಟದ ಉತ್ತಮ ಪ್ರಾಂಶುಪಾಲ ಪ್ರಶಸ್ತಿಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆ ಸರ್ಕಾರ ಪ್ರಶಸ್ತಿಯನ್ನು ತಡೆಹಿಡಿದಿದೆ.
ಕುಂದಾಪುರ ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿಜಿ ಅವರಿಗೆ ಪ್ರಶಸ್ತಿ ಘೋಷಣೆ ಆಗಿತ್ತು. ಆದರೆ ಇವರ ಆಯ್ಕೆ ಕುರಿತು ಹಿಜಾಬ್ ಪರರ ವಿರೋಧ ವ್ಯಕ್ತಪಡಿಸಲಾಗಿದೆ.
ಪ್ರಾಂಶುಪಾಲ ರಾಮಕೃಷ್ಣ ಬಿಜಿ ಅವರಿಗೆ ಎರಡು ವರ್ಷದ ಹಿಂದಿನ ಹಿಜಾಬ್ ವಿವಾದದ ಎಫೆಕ್ಟ್ ಈಗ ತಟ್ಟಿದೆ. ಹಿಜಾಬ್ ವಿವಾದದಲ್ಲಿ ರಾಮಕೃಷ್ಣ ಬಿಜಿ ಅವರ ಹೆಸರು ಕೇಳಿಬಂದಿತ್ತು. ಹಿಜಾಬ್ ಧರಿಸಿ ಬಂದಿದ್ದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಗೇಟ್ ಬಳಿ ತಡೆದಿದ್ದರು.
ವಿದ್ಯಾರ್ಥಿಯನ್ನು ಗೇಟ್ ಬಳಿ ಪ್ರಾಂಶುಪಾಲರು ತಡೆದಿದ್ದ ಫೋಟೋ ವೈರಲ್ ಆಗಿತ್ತು. ಹೀಗಾಗಿ ಪ್ರಶಸ್ತಿ ಹಿಂಪಡೆಯುವಂತೆ ಹಿಜಾಬ್ ಪರ ಹೋರಾಟಗಾರರು ಒತ್ತಡ ಹಾಕಿದ್ದು, ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಪ್ರಶಸ್ತಿ ತಡೆ ಹಿಡಿದಿದ್ದಾರೆ. ರಾಮಕೃಷ್ಣ ಬಿಜಿ ಅವರಿಗೆ ಪ್ರಶಸ್ತಿ ಪ್ರಕಟವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಕೂಡ ವಿರೋಧ ಕೇಳಿಬಂದಿತ್ತು.
ಹಿಜಾಬ್ ಧರಿಸಿ ಬಂದಿದ್ದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಹೊರನಿಲ್ಲಿಸಿದ್ದ ಪ್ರಾಂಶುಪಾಲರ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಉಡುಪಿಯಲ್ಲಿ ಭುಗಿಲೆದಿದ್ದ ವಿವಾದ ರಾಜ್ಯಾದ್ಯಂತ ಹಬ್ಬಿತ್ತು. ಕೊನೆಗೆ ಅಂದಿನ ಬಿಜೆಪಿ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿತ್ತು.



























