ಬಂಟ್ವಾಳ : ರಾ.ಹೆ. 75ರ ಬಿ.ಸಿ. ರೋಡು ಸಮೀಪದ ತಲಪಾಡಿಯಲ್ಲಿ ನವ ದಂಪತಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಮಹಿಳೆ ಸ್ಥಳದಲ್ಲೇ ಮೃತಪಟ್ಟು, ಅವರ ಪತಿ ಗಂಭೀರವಾಗಿ ಗಾಯಗೊಂಡ ಘಟನ ಸ್ಥಳಕ್ಕೆ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಪಘಾತದ ಕುರಿತು ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ರಸ್ತೆ ಸುರಕ್ಷತ ಕ್ರಮಗಳನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಕೈಗೊಳ್ಳಲು ಸೂಕ್ತ ಸೂಚನೆಗಳನ್ನು ನೀಡಿದರು.
ಘಟನೆಯಲ್ಲಿ ಕಾರು ಚಾಲಕ ಕೆದಿಲ ಸತ್ತಿಕಲ್ಲು ನಿವಾಸಿ ಅನೀಶ್‌ಕೃಷ್ಣ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದು, ಅವರ ಪತ್ನಿ ಮಾನಸಾ (22) ಸ್ಥಳದಲ್ಲೇ ಮೃತಪಟ್ಟಿದ್ದರು.
ಎಸ್‌ಪಿಯವರ ಭೇಟಿಯ ವೇಳೆ ಬಂಟ್ವಾಳ ಡಿವೈಎಸ್‌ಪಿ ಎಸ್. ವಿಜಯಪ್ರಸಾದ್, ಬಂಟ್ವಾಳ ನಗರ ಇನ್‌ಸ್ಪೆಕ್ಟರ್ ಅನಂತಪದ್ಮನಾಭ, ಗ್ರಾಮಾಂತರ ಇನ್‌ಸ್ಪೆಕ್ಟರ್ ಶಿವಕುಮಾರ್, ಪಿಎಸ್‌ಐ ಹರೀಶ್ ಎಂ.ಆರ್., ಸಂಚಾರ ಠಾಣೆ ಪಿಎಸ್‌ಐ ಸುತೇಶ್ ಕೆ.ಪಿ. ಮೊದಲಾದವರು ಜೊತೆಗಿದ್ದರು.



























