ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ವತಿಯಿಂದ ನಡೆಸುವಂತಹ ‘ಶಾಸನ-ಶೋಧನ-ಅಧ್ಯಯನ-ಸಂರಕ್ಷಣಾ’ ಯೋಜನೆಯಡಿಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಮುದ್ಯ ಎಂಬಲ್ಲಿ ಇರುವ ಪುರಾತನ ಪಾರ್ವತಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಲಭ್ಯವಾದ ಸುಮಾರು 302 ವರ್ಷ ಪುರಾತನ 17ನೇ ಶತಮಾನದ ಕನ್ನಡ ಶಿಲಾಶಾಸನವನ್ನು ಸಂಶೋಧಕರಾದ ಡಾ. ಉಮಾನಾಥ ಶೆಣೈ ಅವರ ನೇತೃತ್ವದಲ್ಲಿ ಯುವ ಅಧ್ಯಯನಕಾರರಾದ ಶ್ರೀಶಾವಾಸವಿ (ವಿದ್ಯಾಶ್ರೀ ಎಸ್) ತುಳುನಾಡ್ ಸಹಕಾರದೊಂದಿಗೆ ಅಧ್ಯಯನ ಮಾಡಲಾಯಿತು.
ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅಧ್ಯಯನದಲ್ಲಿ ಸಹಕರಿಸಿದರು.

ಪತ್ತೆಯಾದ ಶಿಲಾ ಶಾಸನವು ಸುಮಾರು 37 ಇಂಚು ಎತ್ತರ 21 ಇಂಚು ಅಗಲವಾಗಿದೆ. ಶಾಸನದ ಮುಂಭಾಗದಲ್ಲಿ 18 ಸಾಲುಗಳು ಹಾಗೂ ಹಿಂಭಾಗದಲ್ಲಿ 9 ಸಾಲುಗಳನ್ನು ಒಳಗೊಂಡ ಬರಹವನ್ನು ಕನ್ನಡ ಲಿಪಿಯಲ್ಲಿ ಕೆತ್ತಲಾಗಿದೆ.
ಶಾಸನದ ಶಿರೋಭಾಗದ ಮಂಟಪದಲ್ಲಿ ಶಿವಲಿಂಗದ ಆಕೃತಿಯನ್ನು ಹಾಗೂ ಬಲ, ಎಡಭಾಗದಲ್ಲಿ ಸೂರ್ಯ, ಚಂದ್ರ ಹಾಗೂ ದೀಪಗಳನ್ನು ಕೆತ್ತಲಾಗಿದೆ. ಶಾಸನದ ಹಿಂಭಾಗದಲ್ಲಿ ಬಾಲವನ್ನು ಎತ್ತಿ ಮುಖವನ್ನು ಹಿಂದಕ್ಕೆ ತಿರುಗಿಸಿದ ಭಂಗಿಯಲ್ಲಿರುವ ನೆಗಳೆ (ಶಾರ್ದೂಲ) ಹಾಗೂ ಅದರ ಎಡಬಲ ಭಾಗದಲ್ಲಿ ಐದು ಎಸಳಿನ ಹೂವನ್ನು ಕೆತ್ತಲಾಗಿದೆ.
ದೇವಸ್ಥಾನದ ಜೀರ್ಣೋದ್ಧಾರ ಮಾಡುವ ಸಮಯದಲ್ಲಿ ಭೂಮಿಯ ಒಳಗೆ ಒಂದು ಸಣ್ಣ ಪಂಚ ಲೋಹದ ಮೂರ್ತಿಯು ಲಭ್ಯವಾಗಿದ್ದು, ಸದೃಢ ಮೈಕಟ್ಟಿನ, ಅಲಂಕೃತ ಕುದುರೆ ಏರಿ ಕುಳಿತ ಭಂಗಿಯಲ್ಲಿದೆ. ಮೂರ್ತಿಯು ಪುರುಷನಾಗಿದ್ದು, ಬಲ ಕೈಯಲ್ಲಿ ಹರಿತವಾದ ಖಡ್ಗದ ಆಕಾರದ ಆಯುಧವನ್ನು ಹಿಡಿದಿದ್ದು, ಮೂರ್ತಿಯ ಎರಡು ಕೈ ಮಣಿ ಗಂಟು ಹಾಗೂ ಕೈ ರಟ್ಟೆಯಲ್ಲಿ ಆಭರಣವನ್ನು ಧರಿಸಿದ್ದು, ಎರಡು ಕಾಲುಗಳಲ್ಲಿ ಖಡಗ ಧರಿಸಿದ್ದಾನೆ. ಮೂರ್ತಿಯ ಕಿವಿಯಲ್ಲಿ ಕರ್ಣಕುಂಡಲಗಳಿದ್ದು, ಉದ್ದನೆಯ ಕಿರೀಟಧಾರಿಯಾಗಿ ನೋಡಲು ವೀರಯೋಧನಂತೆ ಕಾಣುತ್ತಾನೆ. ಮೂರ್ತಿ, ಕುದುರೆಯ ಎತ್ತರ ಸುಮಾರು 3 ಇಂಚು ಎತ್ತರ ಇರಬಹುದು.
ಶಾಸನ ತಜ್ಞ ಹಾಗೂ ವಿಗ್ರಹ ತಜ್ಞರಾದ ಡಾ. ವೈ. ಉಮಾನಾಥ ಶೆಣೈ ಅವರ ಪ್ರಕಾರ ಇದು ಸುಮಾರು ಹದಿನಾರನೆಯ ಶತಮಾನಕ್ಕೆ ಸಂಬಂಧಿಸಿದಾಗಿದ್ದು, ಜೈನ ಸಂಪ್ರದಾಯದ ಬ್ರಹ್ಮದೇವರ ಮೂರ್ತಿ. ಇದು ಸ್ಥಳೀಯ ಜೈನ ಬಲ್ಲಾಳ ಅರಸರು ಈ ದೇವಾಲಯಕ್ಕೆ ಕೊಟ್ಟದ್ದಿರಬೇಕು. ಇದು ಪಂಚಲಿಂಗೇಶ್ವರನ ದೇವಾಲಯವಾಗಿರುವುದರಿಂದ ಶಕ್ತಿ ಪರಾಕ್ರಮಗಳ ಜೈನ ಬ್ರಹ್ಮ ದೇವರ ಮೂರ್ತಿಯನ್ನು ಇಲ್ಲಿಗೆ ಕೊಟ್ಟಿರುವುದು ತೀರ ಸಹಜವೇ ಆಗಿದೆ ಎನ್ನುತ್ತಾರೆ.
ಶಾಸನ ಅಧ್ಯಯನ ಮಾಡುವ ಸಮಯದಲ್ಲಿ ದೇವಸ್ಥಾನದ ಭಜಕರಾದ ನಟ್ಟಿ ವೇಣುಗೋಪಾಲ ನಾಯಕ್, ನಾರಾಯಣ ಪೂಜಾರಿ, ಶರತ್ ಕುಮಾರ್, ದಾಮೋದರ ಗೌಡ ಉಪಸ್ಥಿತರಿದ್ದರು.