ವಿಜಯನಗರ : ಕುಡಿದ ಮತ್ತಿನಲ್ಲಿ ಇಬ್ಬರು ಸ್ನೇಹಿತರ ನಡುವೆ ಜಗಳವಾಗಿ ಕೊಲೆಯಲ್ಲಿ ಅಂತ್ಯವಾದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಸಿದ್ದಲಿಂಗಪ್ಪ ಕ್ರಾಸ ಬಳಿ ನಡೆದಿದೆ.
ಶಾಂತಕುಮಾರ (25) ಕೊಲೆಯಾದ ಯುವಕ.
ಕ್ಷುಲ್ಲಕ ಕಾರಣಕ್ಕೆ ನಶೆಯಲ್ಲಿ ಮಾತಿಗೆ ಮಾತು ಬೆಳೆದು ಇಬ್ಬರು ಸ್ನೇಹಿತರು ನಡು ರಸ್ತೆಯಲ್ಲಿಯೇ ಬಡಿದಾಡಿಕೊಂಡಿದ್ದಾರೆ. ಬಳಿಕ ಹುಲಿಗೇಶ ಎಂಬಾತ ಕೈಯಿಂದ ತಲೆಗೆ ಜೋರಾಗಿ ಹೊಡೆದ ಪರಿಣಾಮ ಶಾಂತಕುಮಾರ ನೆಲಕ್ಕೆ ಬಿದ್ದಿದ್ದಾನೆ.
ಆತ ನೆಲಕ್ಕೆ ಬೀಳುತ್ತಿದ್ದಂತೆ ಹುಲಿಗೇಶ ಮನ ಬಂದಂತೆ ಕಾಲಿನಿಂದ ಒದ್ದಿದ್ದಾನೆ. ಪ್ರಜ್ಞೆಯಿಲ್ಲದೆ ನೆಲಕ್ಕೆ ಬಿದ್ದಿದ್ದ ಶಾಂತಕುಮಾರನನ್ನು ಸ್ಥಳೀಯರು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಅಲ್ಲಿಂದ ಕೊಪ್ಪಳ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಯುವಕ ಕೊನೆಯುಸಿರೆಳೆದಿದ್ದಾನೆ.
ಸ್ಥಳಕ್ಕೆ ಹೊಸಪೇಟೆ ಪಟ್ಟಣ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಹುಲಗೇಶನನ್ನ ವಶಕ್ಕೆ ಪಡೆದಿದ್ದಾರೆ.


























