ಲಕ್ನೋ : ಫ್ಲಿಪ್ಕಾರ್ಟ್ ಡೆಲಿವರಿ ಬಾಯನ್ನು ಭೀಕರವಾಗಿ ಕೊಲೆ ಮಾಡಿ ಗೋಣಿ ಚೀಲದಲ್ಲಿ ತುಂಬಿಸಿ ಕಾಲುವೆಗೆ ಎಸೆದ ಘಟನೆ ಲಕ್ನೋದಲ್ಲಿ ನಡೆದಿದೆ.
ಐಫೋನ್ ಆರ್ಡರ್ ಮಾಡಿದ ಗ್ರಾಹಕ ಮತ್ತು ಆತನ ಸ್ನೇಹಿತ ಡೆಲಿವರಿ ಬಾಯನ್ನು ಕೊಂದಿದ್ದು, ಸದ್ಯ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಲಕ್ನೋದ ಚಿನ್ಹಾಟ್ ಸ್ಟೇಷನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಭರತ್ ಕುಮಾರ್ (30) ಕೊಲೆಯಾದ ಡೆಲಿವರಿ ಬಾಯ್. ಐಫೋನ್ ಡೆಲಿವರಿ ಮಾಡುವಾಗ ಹಂತಕರ ಕೈಯಿಂದ ಹತ್ಯೆಯಾಗಿದ್ದಾನೆ.
ಗ್ರಾಹಕ ಆನ್ಲೈನ್ನಲ್ಲಿ ಕ್ಯಾಶ್ ಆನ್ ಡೆಲಿವರಿ ಆಯ್ಕೆ ಮೂಲಕ ಐಫೋನ್ ಆರ್ಡರ್ ಮಾಡಿದ್ದು, ಡೆಲಿವರಿಗೆ ಬಂದಾಗ ಭರತ್ ಕುಮಾರ್ನನ್ನು ಸ್ನೇಹಿತನ ಜೊತೆಗೂಡಿ ಹತ್ಯೆ ಮಾಡಿದ್ದಾನೆ. ಬಳಿಕ ಗೋಣಿ ಚೀಲದಲ್ಲಿ ತುಂಬಿಸಿ ಇಂದಿರಾ ನಗರದ ಕಾಲುವೆಗೆ ಎಸೆದಿದ್ದಾರೆ.
ಸದ್ಯ ಪೊಲೀಸರು ಓರ್ವ ಶಂಕಿತ ಆರೋಪಿ ಗಜಾನನ್ ಎಂಬಾತನನ್ನು ಬಂಧಿಸಿದ್ದಾರೆ. ಡೆಲಿವರಿ ಬಾಯ್ ಭರತ್ ಮೃತದೇಹವನ್ನು ಪೊಲೀಸರು ಕಾಲುವೆಯಲ್ಲಿ ಹುಡುಕಾಡುತ್ತಿದ್ದಾರೆ.
ಚಿನ್ಹತ್ ಗಜಾನನ್ ಕ್ಯಾಶ್ ಆನ್ ಡೆಲಿವರಿ ಆಯ್ಕೆ ಮೂಲಕ 1.5 ಲಕ್ಷದ ಐಫೋನ್ ಆರ್ಡರ್ ಮಾಡಿದ್ದಾನೆ. ಸೆಪ್ಟೆಂಬರ್ 23ರಂದು ಭರತ್ ಕುಮಾರ್ ಆತನಿಗೆ ಡೆಲಿವರಿ ಮಾಡಲು ಹೋಗಿದ್ದನು. ಆದರೆ ಈ ವೇಳೆ ಗಜಾನನ್ ಮತ್ತು ಆತನ ಸ್ನೇಹಿತ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಭರತ್ ಮನೆಗೆ ಹಿಂತಿರುಗದೇ ಇದ್ದಾಗ ಆತನ ಸಹೋದರ ಚಿನ್ಹಾತ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ದೂರಿನ ಬಳಿಕ ಪೊಲೀಸರು ಭರತ್ನನ್ನು ಹುಡುಕಲು ಮುಂದಾಗಿದ್ದು, ಸಿಸಿಟಿವಿ ದೃಶ್ಯಾವಳಿ ಮೂಲಕ ಪರಿಶೀಲಿಸಿದ್ದಾರೆ. ಈ ವೇಳೆ ಅನುಮಾನದ ಮೇರೆಗೆ ಶಂಕಿತ ಆರೋಪಿಯನ್ನು ಬಂಧಿಸಿದಾಗ ನಿಜಾಂಶ ಗೊತ್ತಾಗಿದೆ.


























