ಪುತ್ತೂರು : ಕಳೆದ ವರ್ಷದಿಂದ ಮತ್ತೆ ಪುತ್ತೂರು ಶಾರದೋತ್ಸವದ ಗತ ವೈಭವ ಮರು ಸೃಷ್ಟಿಲಾಗುತ್ತಿದ್ದು, 90ನೇ ವರ್ಷದ ನವರಾತ್ರಿ ಉತ್ಸವ ‘ಪುತ್ತೂರು ಶಾರದೋತ್ಸವ’ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಅ.3 ರಿಂದ 12ರ ತನಕ ನಡೆಯಲಿದ್ದು, ಈ ಬಾರಿ ಮೂರು ಪಟ್ಟು ಹೆಚ್ಚಿನ ಮೆರುಗು ನೀಡಲಾಗುವುದು ಎಂದು ಶ್ರೀ ಶಾರದಾ ಭಜನಾ ಮಂದಿರದ ಗೌರವಾಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು.
ಅ.2ರಂದು ದರ್ಬೆ ವೃತ್ತದಿಂದ ಶಾರದಾ ಭಜನಾ ಮಂದಿರಕ್ಕೆ ಹೊರಕಾಣಿಕೆ ಸಮರ್ಪಣೆ ಮೆರವಣಿಗೆ ನಡೆಯಲಿದೆ.
ಅ.3 ರಂದು ನವರಾತ್ರಿ ಪೂಜೆ ಆರಂಭಗೊಳ್ಳಲಿದೆ. ಅಂದು ಅಕ್ಷರಯಜ್ಞ ಸೇವೆಗಾಗಿ ಭಕ್ತರಿಗೆ ಮತ್ತು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಗುವುದು. ಅ.9 ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಶಾರದಾ ವಿಗ್ರಹ ಪ್ರತಿಷ್ಠೆ ಅಕ್ಷರಯಜ್ಞ ಸರಸ್ವತಿ ಪೂಜೆ ನಡೆಯಲಿದೆ.
ಅ.10 ರಂದು ಬೆಳಿಗ್ಗೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಚಂಡಿಕಾಹೋಮ ನಡೆಯಲಿದೆ. ಅ.12 ರಂದು ಬೆಳಿಗ್ಗೆ ಗಂಟೆ 9ರಿಂದ ಅಕ್ಷರಾಭ್ಯಾಸ, ಸಂಜೆ 5 ಗಂಟೆಗೆ ವೇದ ಘೋಷ, ಚೆಂಡೆಮೇಳ ಹಾಗೂ ಇತರರ ವೈವಿಧ್ಯಗಳೊಂದಿಗೆ ಶೋಭಾಯಾತ್ರೆ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಶಾರದಾ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ, ಹೊರೆಕಾಣಿಕೆ ಸಮಿತಿ ಸಂಚಾಲಕ ರಾಜೇಶ್ ಬನ್ನೂರು, ಶೋಭಾಯಾತ್ರೆಯ ಸಂಚಾಲಕ ನವೀನ್ ಕುಲಾಲ್, ಡಾ. ಸುರೇಶ್ ಪುತ್ತೂರಾಯ, ಸಮಿತಿ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್ ಉಪಸ್ಥಿತರಿದ್ದರು.


























