ಅಬ್ಬಾ.. ಈ ಜಗತ್ತಿನಲ್ಲಿ ಏನೇನೋ ತಿನ್ನುತ್ತಾ ಬದುಕಿರುವ ಮನುಷ್ಯರನ್ನು ಕಾಣಬಹುದು. ಆದರೆ ತಲೆ ಕೂದಲನ್ನೇ ತಿಂದು 16 ವರ್ಷ ಕಾಲ ಕಳೆದ ಯುವತಿ ಉತ್ತರಪ್ರದೇಶದಲ್ಲಿ ಪತ್ತೆಯಾಗಿದ್ದಾಳೆ.
ಬರೇಲಿಯಲ್ಲಿ ಹೊಟ್ಟೆ ನೋವು ಅಂತ ಆಸ್ಪತ್ರೆಗೆ ದಾಖಲಾದ ಯುವತಿಗೆ ಚಿಕಿತ್ಸೆ ನೀಡಿದ ವೈದ್ಯರು ಬೆಚ್ಚಿ ಬೀಳೋ ಮಾಹಿತಿ ಹೊರ ಹಾಕಿದ್ದಾರೆ.
ಬರೇಲಿಯ 21 ವರ್ಷದ ಯುವತಿ ತನಗೆ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದಾಳೆ. ಈಕೆಗೆ ಚಿಕಿತ್ಸೆ ನೀಡಿದ ವೈದ್ಯರು ಹೊಟ್ಟೆಯಿಂದ ಬರೋಬ್ಬರಿ 2 ಕೆಜಿ ತೂಕದ ಮಾನವನ ತಲೆ ಕೂದಲನ್ನು ಹೊರಗೆ ತೆಗೆದು ಅಚ್ಚರಿಗೊಂಡಿದ್ದಾರೆ. ಇದು ಹೇಗೆ ಸಾಧ್ಯ ಅಂತ ಕಾರಣ ಹುಡುಕುತ್ತಾ ವೈದ್ಯರೇ ಬೆಚ್ಚಿ ಬಿದ್ದಿದ್ದಾರೆ.
ಈ ಯುವತಿಗೆ ತಲೆ ಕೂದಲು ತಿನ್ನುವ ಚಟ ಇತ್ತಂತೆ. ಅದು 5ನೇ ವಯಸ್ಸಿನವಳಾಗಿಂದಲೂ ಇದನ್ನೇ ಮುಂದುವರಿಸಿಕೊಂಡು ಬಂದಿದ್ದಾಳೆ. ಕೊನೆಗೆ ಹೊಟ್ಟೆ ನೋವು ಕಾಣಿಸಿಕೊಂಡಾಗ ಚಿಕಿತ್ಸೆಗೆ ದಾಖಲಾಗಿದ್ದಾಳೆ. ಈಕೆಗೆ ಏನೇ ಊಟ ಮಾಡಿದರು ವಾಂತಿಯಾಗುವ ಹಂತಕ್ಕೆ ಹೋಗಿದೆ.
ತಲೆಗೂದಲು ತಿನ್ನುವ ಈ ರೀತಿಯ ವರ್ತನೆಗೆ ವೈದ್ಯರು ಪ್ರಾಯೋಗಿಕವಾಗಿ ಟ್ರೈಕೊಫೇಜಿಯಾ ಅಥವಾ ರಾಪುಂಜೆಲ್ ಸಿಂಡ್ರೋಮ್ ಎಂದು ಕರೆದಿದ್ದಾರೆ. ಮಾನಸಿಕ ಸ್ಥಿಮಿತತೆ ಕಳೆದುಕೊಂಡವರು ತಮ್ಮ ಕೂದಲನ್ನು ತಾವೇ ತಿನ್ನುತ್ತಾರೆ. ಬರೇಲಿಯ ಈ ಯುವತಿ ಕೇಸ್‌ನಲ್ಲೂ ಇದೇ ಆಗಿದೆ.
ಕಳೆದ ಸೆಪ್ಟೆಂಬರ್ 20ರಂದು ಯುವತಿಯನ್ನು ಸಿಟಿ ಸ್ಕ್ಯಾನ್‌ಗೆ ಒಳಪಡಿಸಲಾಗಿದೆ. ಸ್ಕ್ಯಾನ್ ಮಾಡಿದಾಗಲೇ ಯುವತಿಯ ಹೊಟ್ಟೆಯಲ್ಲಿ ರಾಶಿ, ರಾಶಿ ತಲೆ ಕೂದಲು ಇರೋದು ಗೊತ್ತಾಗಿದೆ. ಜಿಲ್ಲಾ ಆಸ್ಪತ್ರೆಯ ಡಾ. ಎಂ.ಪಿ ಸಿಂಗ್ ಅವರು ಯುವತಿಯನ್ನು ವಿಚಾರಿಸಿದಾಗ ತಲೆ ಕೂದಲು ತಿನ್ನುತ್ತಿದ್ದ ಸತ್ಯವನ್ನು ಒಪ್ಪಿಕೊಂಡಿದ್ದಾಳೆ. ಸದ್ಯ ಆಪರೇಷನ್ ಮಾಡಿ ಹೊಟ್ಟೆಯಲ್ಲಿದ್ದ 2 ಕೆಜಿ ಕೂದಲನ್ನು ಹೊರ ತೆಗೆದು ಚಿಕಿತ್ಸೆ ನೀಡಲಾಗಿದೆ.


























