ಉತ್ತರ ಪ್ರದೇಶ : ಮೂರು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಪ್ರಿಯಕರನ ಮನೆಯಲ್ಲಿ ಜೀವಂತವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಸುಮಾರು ಮೂರು ವರ್ಷಗಳ ಹಿಂದೆ ಮಹಿಳೆ ನಾಪತ್ತೆಯಾಗಿದ್ದಾಗ ಆಕೆಯ ಪತಿ ಹಾಗೂ ಅತ್ತೆಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಆಕೆಯನ್ನು ಅಪಹರಿಸಿ ಕೊಲೆ ಮಾಡಲಾಗಿದೆ ಎಂದು ಅಂದಾಜಿಸಲಾಗಿತ್ತು. 3 ವರ್ಷಗಳಿಂದ ಕಾಣಿಸಿಕೊಳ್ಳದ ಆಕೆ ಲಕ್ನೋದಲ್ಲಿ ಬಾಯ್ಫ್ರೆಂಡ್ ಜೊತೆ ಇರುವುದು ತಿಳಿದುಬಂದಿದೆ.
ಕವಿತಾ ಎಂಬುವವರು 2017ರ ನವೆಂಬರ್ 17 ರಂದು ದಾದುಹಾ ಬಜಾರ್ನ ವಿನಯ್ ಎಂಬುವವರನ್ನು ವಿವಾಹವಾಗಿದ್ದರು, ಮೇ 5, 2021ರಿಂದ ಅತ್ತೆ ಮನೆಯಿಂದ ನಾಪತ್ತೆಯಾಗಿದ್ದಳು.
ಕವಿತಾ ಮನೆಯವರು ಆಕೆಯ ಅತ್ತೆ ಹಾಗೂ ಪತಿಯ ವಿರುದ್ಧ ದೂರು ದಾಖಲಿಸಿದ್ದರು. ಎಷ್ಟೇ ಹುಡುಕಿದರೂ ಅವರು ಎಲ್ಲಿದ್ದಾರೆ ಎಂಬುದು ತಿಳಿಯಲಿಲ್ಲ. ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಮತ್ತು ಕೊತ್ವಾಲಿ ಪೊಲೀಸರು ಕವಿತಾ ಅವರನ್ನು ಲಕ್ನೋದ ದಲಿಗಂಜ್ ಪ್ರದೇಶದಲ್ಲಿ ಆಕೆಯ ಗೆಳೆಯ ಸತ್ಯ ನಾರಾಯಣ ಗುಪ್ತಾ ಅವರ ನಿವಾಸದಲ್ಲಿ ಪತ್ತೆ ಮಾಡಿದ್ದಾರೆ ಎಂದು ಅವರು ಹೇಳಿದರು.
ಸತ್ಯ ನಾರಾಯಣ್ ಅವರು ಗೊಂಡಾದ ದುರ್ಜನ್‌ಪುರ ಮಾರುಕಟ್ಟೆಯಲ್ಲಿ ಅಂಗಡಿಯನ್ನು ಹೊಂದಿದ್ದರು ಮತ್ತು ಕವಿತಾ ಅವರನ್ನು ಆಗಾಗ ಭೇಟಿ ಮಾಡುತ್ತಿದ್ದರು. ಅವರ ನಡುವೆ ಪ್ರೀತಿ ಹುಟ್ಟಿತ್ತು.
ಹಾಗಾಗಿ ಅವರು ಅಲ್ಲಿಂದ ಓಡಿಹೋಗುವ ಯೋಜನೆ ರೂಪಿಸಿದ್ದರು. ಲಕ್ನೋಗೆ ಹೋಗುವ ಮುನ್ನ ಒಂದು ವರ್ಷ ಅಯೋಧ್ಯೆಯಲ್ಲಿ ಸತ್ಯನಾರಾಯಣ ಅವರ ಜತೆ ಆಕೆ ವಾಸವಿದ್ದಳು ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ. ಕವಿತಾ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ವರದಿಯಾಗಿದೆ.