ಪುತ್ತೂರು : ದೇವಾಲಯಗಳ ಸಂವರ್ಧನಾ ಸಮಿತಿ ಮಂಗಳೂರು ವಿಭಾಗ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆ ವ್ಯಾಪ್ತಿ ನೇತೃತ್ವದಲ್ಲಿ ಹಿಂದೂ ಧಾರ್ಮಿಕ ಶಿಕ್ಷಣ ಕೇಂದ್ರಗಳ ಸಹಕಾರದೊಂದಿಗೆ ಮಕ್ಕಳಿಂದ ಮನೆ-ಮನೆಯಲ್ಲಿ ಶಾರದಾ ಪೂಜೆ ಅ.12 ರಂದು ನಡೆಯಲಿದೆ.
ಮನೆಯಲ್ಲಿ ಶಾಲಾ ಪಠ್ಯ ಪುಸ್ತಕ ಹಾಗೂ ಧಾರ್ಮಿಕ ಪುಸ್ತಕಗಳಿಗೆ ಹೂ ಇಟ್ಟು, ಶಾರದೆಗೆ ಹಾಲು, ಹಣ್ಣು ಸಮರ್ಪಿಸಿ ಆರತಿ ಮಾಡುವ ಮೂಲಕ ಪೂಜಿಸಬಹುದಾಗಿದೆ.
ಹಿಂದೆ ಶಾಲೆಗಳಲ್ಲಿ ಶಾರದಾ ಪೂಜೆಯನ್ನ ಒಂದು ಉತ್ಸವ ರೀತಿಯಲ್ಲಿ ಆಚರಿಸಲಾಗುತ್ತಿತ್ತು. ಭಾರತದ ಸಂಪ್ರದಾಯ ಮತ್ತು ಧರ್ಮದ ನೆಲೆಗಟ್ಟಿನಲ್ಲಿ ವಿದ್ಯೆಗೆ ಶಾರದಾ ದೇವಿಯ ಅನುಗ್ರಹ ಮತ್ತು ಮಹತ್ವವನ್ನ ಸಾರುವ ಕಾರ್ಯಕ್ರಮಗಳು ನಡೆಯುತ್ತಿತ್ತು. ಕಾರಣಾಂತರಗಳಿಂದ ಅವು ಈಗ ನಿಂತು ಹೋಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ದೇವಿ ಶಾರದೆಯ ಮಹತ್ವವನ್ನ ಅರಿವು ಮೂಡಿಸಲು ಈ ಕಾರ್ಯಕ್ರಮ.
ಕಳೆದ ವರ್ಷ ಕೊಯ್ಲ ಗ್ರಾಮದಲ್ಲಿ ಎದುಶ್ರೀ ಅವರ ನೇತೃತ್ವದಲ್ಲಿ ಸುಮಾರು 600 ಮನೆಗಳಲ್ಲಿ ನಡೆದ ಈ ಶಾರದಾ ಪೂಜೆಯ ಪ್ರೇರಣೆ ಪಡೆದು ಈ ವರ್ಷ ದೇವಾಲಯ ಸಂವರ್ಧನ ಸಮಿತಿ ಮಂಗಳೂರು ವಿಭಾಗದ ಮೂಲಕ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಹಿಂದೂ ಧಾರ್ಮಿಕ ಶಿಕ್ಷಣ ಕೇಂದ್ರಗಳ ಮೂಲಕ ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನ ಮೂಡಿಸಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಎರಡು ಜಿಲ್ಲೆಗಳಲ್ಲಿ ಸುಮಾರು 3000ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಶಾರದಾ ಪೂಜೆಯನ್ನ ಮಾಡಲಿದ್ದಾರೆ ಎಂದು ಅಂದಾಜಿಸಲಾಗಿದೆ.
ವಿಶೇಷವಾಗಿ ಶಾರದಾ ಪೂಜೆಯ ಪ್ರಯುಕ್ತ ಮನೆಯ ದೇವರ ಕೋಣೆಯಲ್ಲಿ ಮಕ್ಕಳು ದಿನಾಂಕ 12ರಂದು ಬೆಳಗ್ಗೆ ಪಠ್ಯಪುಸ್ತಕಗಳು ಹಾಗೂ ಧಾರ್ಮಿಕ ಶಿಕ್ಷಣದ ಕೇಂದ್ರದ ಪುಸ್ತಕವನ್ನು ಮೇಲೆ ಇಟ್ಟು ಮಕ್ಕಳು ದೀಪ ಬೆಳಗಿಸಿ ಆರತಿಮಾಡಿದ 10ರಿಂದ 20 ಸೆಕೆಂಡ್ಸ್ ನ ವಿಡಿಯೋ ಮಾಡಿ ಕಳಿಸಬೇಕಾಗಿ ಧಾರ್ಮಿಕ ಶಿಕ್ಷಣ ಕೇಂದ್ರದ ಮುಖ್ಯಸ್ಥರು ವಿನಂತಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಿರುವ ಕಾರಣ ಮಕ್ಕಳೆಲ್ಲರೂ, ಸಂಸ್ಕೃತಿಗೆ ಮೆರಗು ನೀಡುವಂತಹ ಧಾರ್ಮಿಕ ಉಡುಪಿನೊಂದಿಗೆ, ಕೇಸರಿ ಶಾಲು ಧರಿಸಿ ವಿಡಿಯೋ ಮಾಡಿ ಕಳುಹಿಸುವಂತೆ ಧಾರ್ಮಿಕ ಶಿಕ್ಷಣ ಕೇಂದ್ರದ ಮುಖ್ಯಸ್ಥರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9901336916 ಸಂಪರ್ಕಿಸಬಹುದಾಗಿದೆ.
