ನವದೆಹಲಿ : ಕರ್ನಾಟಕ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ದೆಹಲಿಯ ವಿಜ್ಞಾನ ಭವನದಲ್ಲಿ ಇಂದು (ಅಕ್ಟೋಬರ್ 15) ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಎರಡು ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದರು.
ಇದೇ ವೇಳೆ ಕರ್ನಾಟಕದ ಶಿಗ್ಗಾಂವಿ(ಹಾವೇರಿ), ಚನ್ನಪಟ್ಟಣ)ರಾಮನಗರ) ಮತ್ತು ಸಂಡೂರು(ಬಳ್ಳಾರಿ ಜಿಲ್ಲೆ) ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಗೆ ದಿನಾಂಕ ಪ್ರಕಟಿಸಿದ್ದು, ನವೆಂಬರ್ 13ರಂದು ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಇನ್ನು ನವೆಂಬರ್ 23ರಂದು ಈ ಮೂರು ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.
ಸಂಸದರಾಗಿ ಆಯ್ಕೆಯಾಗಿರುವ ಹೆಚ್ಡಿ ಕುಮಾರಸ್ವಾಮಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಚನ್ನಪಟ್ಟಣ ಕ್ಷೇತ್ರ ತೆರವಾಗಿದ್ದರೆ, ಬಸವರಾಜ ಬೊಮ್ಮಾಯಿ ರಾಜೀನಾಮೆಯಿಂದ ಶಿಗ್ಗಾಂವಿ (ಹಾವೇರಿ ಜಿಲ್ಲೆ) ವಿಧಾನಸಭಾ ಕ್ಷೇತ್ರ ತೆರವಾಗಿದೆ. ಇನ್ನು ಇ.ತುಕಾರಾಂ ರಾಜೀನಾಮೆಯಿಂದ ತೆರವಾಗಿರುವ ಸಂಡೂರು ಕ್ಷೇತ್ರಕ್ಕೆ ಇದೀಗ ಉಪಚುನಾವಣೆಗೆ ದಿನಾಂಕ ಫಿಕ್ಸ್ ಆಗಿದೆ.
ಪ್ರಮುಖ ದಿನಾಂಕಗಳು
- ಅಕ್ಟೋಬರ್ 18ರಿಂದ ಉಪಚುನಾವಣೆಗೆ ಅಧಿಸೂಚನೆ ಪ್ರಕಟ
- ಅಕ್ಟೋಬರ್ 25ರಂದು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಕೊನೆ ದಿನ
- ಅಕ್ಟೋಬರ್ 28ರಂದು ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ
- ಅಕ್ಟೋಬರ್ ಅ.30ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನ
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಮುಹೂರ್ತ ನಿಗದಿ ಮಾಡಿದೆ. ನ.20ರಂದು ಚುನಾವಣೆ ನಡೆಯಲಿದ್ದು, ನ.23ರಂದು ಫಲಿತಾಂಶ ಹೊರಬೀಳಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಮಹಾರಾಷ್ಟ್ರದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. 26 ಜಿಲ್ಲೆಗಳ 288 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. 4.97 ಕೋಟಿ ಮತದಾರರು ನೋಂದಣಿಯಾಗಿದ್ದಾರೆ.
1,00,186 ಮತದಾನ ಕೇಂದ್ರಗಳನ್ನು ನಿರ್ಮಾಣ ಮಾಡಲಾಗಿದೆ. ಮತದಾನ ಕೇಂದ್ರಗಳಲ್ಲಿ ಎಲ್ಲಾ ಅಗತ್ಯ ಸೌಕರ್ಯಗಳನ್ನು ನಿರ್ಮಿಸಲಾಗುವುದು. ಮತದಾನದ ಲೈನ್ನಲ್ಲಿ ಕುರ್ಚಿ ಮತ್ತು ಟೇಬಲ್ ಹಾಕಲು ಸೂಚಿಸಲಾಗಿದೆ. ಇದು ವೃದ್ಧ ಮತದಾರರಿಗೆ ಅನುಕೂಲವಾಗಲಿದೆ. 85 ವರ್ಷ ಮೇಲ್ಪಟ್ಟವರಿಗೆ ಮನೆಯಿಂದ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಹಿರಿಯರ ಮತ ಪಡೆಯುವ ರೂಟ್ಮ್ಯಾಪ್ ರಾಜಕೀಯ ಪಕ್ಷಗಳಿಗೆ ನೀಡಲಾಗುವುದು. ಮತದಾನದ ಸಂಪೂರ್ಣ ವೀಡಿಯೋ ಚಿತ್ರೀಕರಣ ನಡೆಸಲಾಗುವುದು ಎಂದು ಕೇಂದ್ರ ಚುನಾವಣಾ ಅಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.