ಮಂಗಳೂರು : ವೆಚ್ಚ ಕಡಿತಕ್ಕೆ ಮುಂದಾಗಿರುವ ರಾಜ್ಯ ಸರಕಾರವು ಬಿಪಿಎಲ್ ಕಾರ್ಡ್ಗಳ ಪರಿಷ್ಕರಣೆಗೆ ಹೊರಟಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 54,093 ಮತ್ತು ಉಡುಪಿ ಜಿಲ್ಲೆಯಲ್ಲಿ 39,627 ಕಾರ್ಡ್ಗಳ ಪರಿ ಶೀಲನೆಗೆ ಸೂಚನೆ ಬಂದಿದ್ದು, ಈ ಪೈಕಿ ಶೇ. 2ರಷ್ಟು ಕಾರ್ಡ್ ರದ್ದಾಗುವ ಸಾಧ್ಯತೆ ಇದೆ. ಆದರೆ ಪೂರ್ಣ ಪ್ರಮಾಣದಲ್ಲಿ ಪರಿಶೀಲಿಸದೆ ರದ್ದು ಮಾಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಡ್ ಪರಿಷ್ಕರಣೆಗೆ ಮುಂದಾಗಿರುವುದರಿಂದ ಪೂರಕ ದಾಖಲೆಯನ್ನು ನೀಡುವುದಕ್ಕಾಗಿ ಪಡಿತರದಾರರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಅನ್ನಭಾಗ್ಯ ಅಕ್ಕಿ ಪಡೆಯುವವರಿಗೆ ಸಮಸ್ಯೆಯಾಗಿದೆ.
ಮೊದಲಿಗೆ ಅನರ್ಹ ಆಗುವ ಸಾಧ್ಯತೆಯ ಪಡಿತರ ಚೀಟಿಯ ಮಾಹಿತಿಯನ್ನು ಎಲ್ಲ ಪಡಿತರ ವಿತರಕರಿಗೆ ರವಾನಿಸಲಾಗಿದೆ. ಆದಾಯ ಮತ್ತು ಮನೆಯ ಪರಿಸ್ಥಿತಿ ಅವಲೋಕಿಸಿಯೇ ಬಿಪಿಎಲ್ ಕಾರ್ಡ್ ರದ್ದು ಮಾಡುವ ಪ್ರಕ್ರಿಯೆ ಆರಂಭವಾಗಿದೆ.
ನಿತ್ಯ ನೂರಾರು ಮಂದಿ ತಾಲೂಕು ಕಚೇರಿಗೆ ಬಂದು ಆಧಾರ್, ವರಮಾನ ಮಾಹಿತಿ ಮುಂತಾದ ವಿವರಗಳನ್ನು ನೀಡುತ್ತಿದ್ದಾರೆ.
ಕಾರ್ಡು ಅಮಾನತು ಹಾಗೂ ರದ್ದು ಮಾಡುವ ಅಧಿಕಾರ ಆಹಾರ ನಿರೀಕ್ಷಕರಿಗಿದೆ. ಕಾರ್ಡ್, ಪಡಿತರ ತಡೆಹಿಡಿದರೆ ಆದಾಯ ಪ್ರಮಾಣೀಕರಣ ದಾಖಲಿಸಿ ಪರಿಶೀಲನೆಗೆ ಅರ್ಜಿ ನೀಡಿದರೆ ಆಹಾರ ನಿರೀಕ್ಷಕರು ಖುದ್ದು ಪರಿಶೀಲಿಸಿ ಕಾರ್ಡ್ ರದ್ದು, ಅಮಾನತು ಅಥವಾ ಸಕ್ರಿಯಗೊಳಿಸುವ ಬಗ್ಗೆ ನಿರ್ಧರಿಸುತ್ತಾರೆ.
ಅಮಾನತಾದರೆ ಆಹಾರ ನಿರೀಕ್ಷಕರು, ತಹಶೀಲ್ದಾರ್ ವರದಿ ಪಡೆದು ಜಿಲ್ಲಾ ಉಪ ನಿರ್ದೇಶಕರು ಕೇಂದ್ರ ಕಚೇರಿಗೆ ಮನವಿ ಮಾಡಿ ಮರಳಿ ಕಾರ್ಡು ಮಂಜೂರು ಮಾಡಲು ಅವಕಾಶ ಇದೆ. ರದ್ದಾದರೆ ಹೊಸ ಕಾರ್ಡು ಮಾಡಬೇಕು. ಸದ್ಯ ಕೆಲವು ವರ್ಷಗಳಿಂದ ಹೊಸ ಬಿಪಿಎಲ್ ಕಾರ್ಡ್ಗೆ ಅವಕಾಶ ಇಲ್ಲ. ಕಾರ್ಡ್ನಲ್ಲಿ ಹೆಸರು ಇರುವ ಯಾವುದೇ ವ್ಯಕ್ತಿ ವಿದೇಶದಲ್ಲಿದ್ದರೂ ಕಾರ್ಡ್ ರದ್ದಾಗಲಿದೆ.
ಆಹಾರ ಇಲಾಖೆ ಕಳುಹಿಸಿರುವ ಪಟ್ಟಿ ಪ್ರಕಾರ ಪುತ್ತೂರು ತಾಲೂಕಿನಲ್ಲಿ 5,402, ಸುಳ್ಯ 2,998, ಬಂಟ್ವಾಳ 8,835, ಬೆಳ್ತಂಗಡಿ 7,075, ಕಡಬ 2,911, ಮಂಗಳೂರು 14,092, ಮೂಡಬಿದಿರೆ 2,865, ಮೂಲ್ಕಿ 1,932, ಉಳ್ಳಾಲ 7,983 ಬಿಪಿಎಲ್ ಕಾರ್ಡ್ದಾರರನ್ನು ಅನರ್ಹ ಪಟ್ಟಿಯಲ್ಲಿ ಗುರುತಿಸಲಾಗಿದೆ. ಅನರ್ಹ ಕಾರ್ಡ್ಗಳ ಪರಿಶೀಲನೆ ನಡೆಯುತ್ತಿದೆ.
ಉಡುಪಿ ಜಿಲ್ಲೆಯ 39,627 ಬಿಪಿಎಲ್ ಕಾರ್ಡ್ ಗಳು ಅನರ್ಹತೆ ಹೊಂದಬಹುದಾದ ಪಟ್ಟಿಯಲ್ಲಿದ್ದು, ಪರಿಶೀಲನೆಗೆ ಕೇಂದ್ರ ಕಚೇರಿಯಿಂದ ಜಿಲ್ಲೆಗೆ ಕಳುಹಿಸಲಾಗಿತ್ತು.
ಈ ಪೈಕಿ 34,112 ಕಾರ್ಯಗಳ ಪರಿಶೀಲನೆ ಕಾರ್ಯ ಪೂರ್ಣಗೊಂಡಿದ್ದು, 5,515 ಕಾರ್ಡ್ ಗಳ ಪರಿಶೀಲನೆ ಬಾಕಿಯಿದೆ. 39,627 ಕಾರ್ಡ್ಗಳಲ್ಲಿ ಕೇವಲ 464 ಕಾರ್ಡ್ ಮಾತ್ರ ಅನರ್ಹ ಎಂಬುದು ತಿಳಿದು ಬಂದಿದೆ. ಅನರ್ಹತೆ ಸಾಧ್ಯತೆ ಪಟ್ಟಿಯಲ್ಲಿ ಇರುವ ಕಾರ್ಡ್ಗಳು ಕಾರ್ಕಳ-6,689, ಕುಂದಾಪುರ-7,551, ಉಡುಪಿ-11,238, ಕಾಪು-4,943, ಬ್ರಹ್ಮಾವರ-5,928, ಬೈಂದೂರು-2,056, ಹೆಬ್ರಿ-1,222. ಒಟ್ಟು-39627.