ಮಂಗಳೂರು: ವಿಧಾನ ಪರಿಷತ್ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರದ ಕ್ಷೇತ್ರದ ಉಪಚುನಾವಣೆ ಅ.21ರಂದು ನಡೆಯಲಿದ್ದು, ಅಗತ್ಯ ಸಿದ್ಧತೆ ಪೂರ್ಣಗೊಂಡಿದೆ.
ರವಿವಾರ ಮತಗಟ್ಟೆಗಳಿಗೆ ಮತಪತ್ರ ಮತ್ತು ಸಿಬ್ಬಂದಿ ಕಳುಹಿಸಿಕೊಡುವ ಮಸ್ಟರಿಂಗ್ ಕಾರ್ಯ ಜಿಲ್ಲಾದ್ಯಂತ ನಡೆಯಿತು.
ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಜಿಲ್ಲೆಯ ವಿವಿಧ ಕಡೆಗಳ ಚುನಾವಣೆ ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ವ್ಯವಸ್ಥೆ ಗಳನ್ನು ಪರೀಶೀಲಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಮತಗಟ್ಟೆ ಕೇಂದ್ರದ 100 ಮೀ. ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೆ ವ್ಯಾಪಾರ ವಹಿವಾಟು, ಜನಸಂದಣಿ ಗುಂಪು ಗುಂಪಾಗಿ ಜನ ಸೇರದಂತೆ ಸೂಚಿಸಲಾಗಿದೆ.
ಈ ಬಗ್ಗೆ ಮತಗಟ್ಟೆಗಳು ಇರುವ ಪ್ರದೇಶ ವ್ಯಾಪ್ತಿಗೆ ಸಂಬಂಧಿಸಿದಂತೆ ನಿಷೇಧಾಜ್ಞೆ ಹೊರಡಿಸಲಾಗಿದೆ. ಎಲ್ಲ ಮತಗಟ್ಟೆಗಳಿಗೆ ಭದ್ರತೆ ಸಂಬಂಧಿಸಿ ಒಟ್ಟು 540 ಪೊಲೀಸ್ ಅಧಿಕಾರಿ/ ಸಿಬ್ಬಂದಿ ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ 328 ಪೊಲೀಸ್ ಅಧಿ ಕಾರಿ/ಸಿಬ್ಬಂದಿ ಕೂಡ ನಿಯೋಜಿಸಲಾಗಿದೆ.
ಚುನಾವಣ ಕಣದಲ್ಲಿ ಕಿಶೋರ್ ಬಿ.ಆರ್. (ಭಾರತೀಯ ಜನತಾ ಪಾರ್ಟಿ), ರಾಜು ಪೂಜಾರಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್), ಅನ್ವರ್ ಸಾದತ್ ಎಸ್. (ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ), ಮತ್ತು ದಿನಕರ ಉಳ್ಳಾಲ (ಪಕ್ಷೇತರ) ಸ್ಪರ್ಧಿಸುತ್ತಿದ್ದಾರೆ.