ಹುಬ್ಬಳ್ಳಿ : ರಾಜ್ಯದಲ್ಲಿ ಜನರು ದೀಪಾವಳಿ ಹಬ್ಬದ ಅಗತ್ಯ ತಯಾರಿಯಲ್ಲಿ ತೊಡಗಿದ್ದಾರೆ. ಇನ್ನೂ ಬಡವರು ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳಲು ಅನುಕೂಲವಾಗುವಂತೆ ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮುಖೇನ ಪಡಿತರ ಅಕ್ಕಿ, ಗೋಧಿ ಇನ್ನಿತರ ಆಹಾರ ಧಾನ್ಯ ವಿತರಿಸುತ್ತದೆ. ಆದರೆ ಈ ಬಾರಿ ದೀಪಾವಳಿ ಹಬ್ಬಕ್ಕೂ ಮೊದಲೇ ಪಡಿತರ ವಿತರಣೆಗೆ ತಾಂತ್ರಿಕ ಸಮಸ್ಯೆ ಎದುರಾಗಿದೆ.
ಇಲಾಖೆ ವ್ಯಾಪ್ತಿಯ ಹೊಸ ಸರ್ವರ್ ಸಮಸ್ಯೆಯಿಂದ ಫಲಾನುಭವಿಗಳು ಹಾಗೂ ಆಹಾರ ಧಾನ್ಯ ವಿತರಕರು ಪರದಾಡುತ್ತಿದ್ದಾರೆ. ಸರ್ವರ್ ಸಮಸ್ಯೆ ಇನ್ನೇನು ಗಂಟೆಯಲ್ಲಿ ಸರಿಹೋಗುತ್ತದೆ ಕಾದು ಕಾದು ಹೈರಾಣಾಗಿದ್ದಾರೆ. ಕೇವಲ ಉತ್ತರ ಕರ್ನಾಟಕ, ಹುಬ್ಬಳ್ಳಿ ಧಾರವಾಡದ ಸಮಸ್ಯೆ ಮಾತ್ರವಲ್ಲ. ಇಡೀ ರಾಜ್ಯದಲ್ಲಿ ಬಹುತೇಕ ಎಲ್ಲ ಕಡೆಗಳಲ್ಲಿ ಈ ಸರ್ವರ್ ಸಮಸ್ಯೆಯಿಂದ ಹೀಗೆ ಆಗಿದೆ.
ಮಾಸಿಕ ವಿತರಣೆಯಂತೆ ಈ ತಿಂಗಳಲ್ಲಿ ಸದ್ಯಕ್ಕೆ ಶೇಕಡಾ 5 ರಷ್ಟು ಕಾರ್ಡ್‌ಗಳಿಗೆ ಮಾತ್ರ ಪಡಿತರ ವಿತರಣೆ ಆಗಿದೆ. ಉಳಿದ 95ರಷ್ಟು ಪಡಿತರದಾರರು ನಿತ್ಯ ನ್ಯಾಯಬೆಲೆ ಅಂಗಡಿಗಳಿಗೆ ಅಲೆಯುತ್ತಿದ್ದಾರೆ.
ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ವಿತರಣೆ ಕಾರ್ಯಕ್ಕೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಹೊಸ ಸರ್ವರ್ ಅಳವಡಿಸಿದೆ. ಇದೀಗ ಸರ್ವರ್‌ನಲ್ಲಿ ಸಮಸ್ಯೆ ಆಗಿದೆ. ಇದರಿಂದ ಪಡಿತರದಾರರು ಹೈರಾಣಾಗುತ್ತಿದ್ದಾರೆ.
ಹಬ್ಬದ ಸಂದರ್ಭಗಳಲ್ಲಿ ದಿನಸಿ ಜೊತೆಗೆ ಆಹಾರ ಧಾನ್ಯಕ್ಕೂ ಹೆಚ್ಚಿನ ಬೇಡಿಕೆ ಇರುತ್ತದೆ. ಈ ಪಡಿತರ ಸಿಕ್ಕರೆ ಹಬ್ಬದಕ್ಕೆ ಅನುಕೂಲವಾಗಲಿದೆ ಎಂದುಕೊಂಡಿದ್ದ ಪಡಿತರದಾರರಿಗೆ ನಿರಾಸೆಯಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ಪಾಯಿಂಟ್ ಆಪ್ ಸೇಲ್ (ಇ-ಪಿಒಎಸ್) ಯಂತ್ರಗಳ ಕಾರ್ಯಾಚರಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಆನ್‌ಲೈನ್ ವ್ಯವಸ್ಥೆಗೆ ಇಲಾಖೆ ನೂತನ ಸರ್ವರ್ ಅಳವಡಿಸಿದೆ. ಇದರಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಅದು ಇಡೀ ರಾಜ್ಯಾದ್ಯಂತ ಪಡಿತರ ವಿತರಣೆ ವ್ಯವಸ್ಥೆಯ ಮೇಲೆಯೇ ಪರಿಣಾಮ ಬೀರಿದೆ.



























