ಬೆಂಗಳೂರು: ಪಟಾಕಿ ಜೊತೆ ಹುಡುಗಾಟ ಆಡಬೇಡಿ ಎಂದು ಪದೇ ಪದೇ ಹೇಳುತ್ತಿರುತ್ತಾರೆ. ಆದರೆ ಸಾಕಷ್ಟು ಬಾರಿ ಸಲಹೆ ನೀಡಿದರೂ ಕೆಲ ಹುಡುಗರು ಅದನ್ನ ಕಿವಿಗೆ ಹಾಕಿಕೊಳ್ಳದೇ ಜೀವಕ್ಕೆ ಕುತ್ತು ತಂದುಕೊಂಡಿರುವ ಹಲವು ಘಟನೆಗಳು ನಡೆದಿವೆ. ಅದೇ ರೀತಿಯಾಗಿ ಸ್ನೇಹಿತರ ಗ್ಯಾಂಗೊಂದು ದೀಪಾವಳಿ ಹಬ್ಬದ ದಿನ ಪಟಾಕಿ ಸಿಡಿಸುವ ವಿಚಾರಕ್ಕೆ ಚಾಲೆಂಜ್ ಮಾಡಿ ಓರ್ವ ವ್ಯಕ್ತಿಯ ಸಾವಿಗೆ ಕಾರಣರಾಗಿದ್ದಾರೆ.
ನಗರದ ಕೋಣನಕುಂಟೆ ವ್ಯಾಪ್ತಿಯ ವಿವರ್ಸ್ ಕಾಲೋನಿಯಲ್ಲಿ ಈ ಹುಚ್ಚಾಟ ನಡೆದಿದ್ದು ಯುವಕ ಶಬರಿ ಸಾವನ್ನಪ್ಪಿದ್ದಾನೆ. ಯುವಕರ ಹುಚ್ಚಾಟ ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಯುವಕರು ಶಬರಿ ಜೊತೆ ಚಾಲೆಂಜ್ ಮಾಡುತ್ತಾ ಡಬ್ಬವೊಂದರಲ್ಲಿ ಪಟಾಕಿ ಇರಿಸಿ ಅದರ ಮೇಲೆ ಯುವಕನನ್ನು ಕೂರಿಸಿದ್ದಾರೆ. ನಂತರ ಪಟಾಕಿ ಹೊತ್ತಿಕೊಳ್ಳುತ್ತಿದ್ದಂತೆ ಯುವಕರೆಲ್ಲಾ ಓಡಿದ್ದಾರೆ. ಪಟಾಕಿ ಸ್ಪೋಟಗೊಂಡು ಶಬರಿ ದೇಹದ ಹಿಂಬದಿಗೆ ತೀವ್ರ ಗಾಯವಾಗಿತ್ತು
ಅಕ್ಟೋಬರ್ 31ರ ರಾತ್ರಿ ಘಟನೆ ನಡೆದಿದ್ದು ಗಂಭೀರವಾಗಿ ಗಾಯಗೊಂಡಿದ್ದ ಶಬರಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ ಚಿಕಿತ್ಸೆ ಫಲಿಸದೇ ಎರಡು ದಿನಗಳ ಬಳಿಕ ಸಾವನ್ನಪ್ಪಿದ್ದಾನೆ.

ಹುಡುಗರ ಹುಚ್ಛಾಟದ ಬಗ್ಗೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತನಿಖೆ ವೇಳೆ ಪಟಾಕಿ ಡಬ್ಬದ ಮೇಲೆ ಕುಳಿತು ಪಟಾಕಿ ಸ್ಫೋಟದ ಬಳಿಕವೂ ನೀನು ಎದ್ದು ನಿಂತರೆ ಆಟೋ ನೀಡುತ್ತೇವೆ ಎಂದು ಸ್ನೇಹಿತರು ಚಾಲೆಂಜ್ ಮಾಡಿದ್ದ ವಿಚಾರ ಶಾಕಿಂಗ್ ವಿಚಾರ ಬಯಲಾಗಿದೆ.
ಸದ್ಯ ಆರು ಮಂದಿ ವಿರುದ್ದ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ನವೀನ್, ದಿನಕರ್, ಸತ್ಯವೇಲು, ಕಾರ್ತಿಕ್, ಸತೀಶ್, ಸಂತೋಷ್ ಬಂಧಿಸಿ ತನಿಖೆ ನಡೆಸಿದ್ದಾರೆ. ಆಟೋ ಸಿಗುತ್ತೆ ಅಂತಾ ಪಟಾಕಿ ಜೊತೆ ಚೆಲ್ಲಾಟವಾಡಿದ ಯುವಕರು ಓರ್ವ ಯುವಕನ ಜೀವದ ಆಟವನ್ನು ಮುಗಿಸಿದ್ದು ದುರಂತವೇ ಸರಿ.