ಉಪ್ಪಿನಂಗಡಿ: ತನ್ನ ಫೇಸ್‌ಬುಕ್ ಫ್ರೆಂಡ್ಸ್ ಬಳಗದಲ್ಲಿದ್ದ ಮಹಿಳೆಯೋರ್ವಳು ಹದಿ ಹರೆಯದ ವಿದ್ಯಾರ್ಥಿಯೋರ್ವನನ್ನು ಪ್ರೇಮಪಾಶಕ್ಕೆ ಸಿಲುಕಿಸಿ ವಿಡಿಯೋ ಸಂಭಾಷಣೆಯಲ್ಲಿ ನಗ್ನಳಾಗಿ ಕಾಣಿಸಿಕೊಂಡು ಬಳಿಕ ವಿದ್ಯಾರ್ಥಿಯನ್ನು ಬೇರೊಬ್ಬ ವ್ಯಕ್ತಿಯ ಮೂಲಕ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಕಂಗೆಟ್ಟ ವಿದ್ಯಾರ್ಥಿಯನ್ನು ಪೊಲೀಸ್ ಇಲಾಖೆಯ ಸಕಾಲಿಕ ಕ್ರಮದಿಂದ ರಕ್ಷಿಸಲಾದ ಘಟನೆ ವರದಿಯಾಗಿದೆ.
ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ನಿವಾಸಿಯಾಗಿರುವ ಕಾಲೇಜು ವಿದ್ಯಾರ್ಥಿಯೋರ್ವನ ಫೇಸ್‌ಬುಕ್ ಸಂಪರ್ಕದಲ್ಲಿದ್ದ ಮಹಿಳೆಯೋರ್ವಳು ಆತ್ಮೀಯತೆಯನ್ನು ಮೂಡಿಸಿ ವಿದ್ಯಾರ್ಥಿಗೆ ವಿಡಿಯೋ ಕರೆ ಮಾಡಿದ್ದಳು.
ಕರೆ ಸ್ವೀಕರಿಸಿದ ವಿದ್ಯಾರ್ಥಿಗೆ ತನ್ನ ನಗ್ನ ದೇಹವನ್ನು ಕಾಣಿಸಿ ಆತನ ಭಾವನೆಯನ್ನು ಕೆರಳಿಸಲು ಯತ್ನಿಸಿದ್ದಾಳೆ. ಬಳಿಕ ವಿಡಿಯೋ ಕರೆಯಲ್ಲಿ ಕಾಣಿಸಿಕೊಂಡ ವಿದ್ಯಾರ್ಥಿಯ ಮುಖವನ್ನು
ಬಳಸಿ ಅಶ್ಲೀಲ ವಿಡಿಯೋಗೆ ಎಡಿಟ್ ಮಾಡಿ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬೇರೊಬ್ಬ ವ್ಯಕ್ತಿಯು ನೊಂದ ವಿದ್ಯಾರ್ಥಿಗೆ ಪೋನ್ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇರಿಸಿದ್ದಾನೆ.
ಪದೇ ಪದೇ ಹಣಕ್ಕಾಗಿ ಬೇಡಿಕೆಯನ್ನು ಮುಂದಿರಿಸಿ ಅಶ್ಲೀಲ ವಿಡಿಯೋ ವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿಯೂ ಆತ ಬೆದರಿಸಿದ್ದಾನೆ.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನಲೆ ಪೊಲೀಸ್ ಇಲಾಖೆಯ ಗಮನಕ್ಕೆ ತಮ್ಮ ಕೃತ್ಯದ ಬಗ್ಗೆ ಮಾಹಿತಿ ಲಭಿಸಿದೆ ಎಂಬ ಸುಳಿವು ಸಿಕ್ಕಾಕ್ಷಣ, ವಿದ್ಯಾರ್ಥಿಯನ್ನು ಬೆದರಿಸುವ ಕಾರ್ಯದಿಂದ ವಿಮುಖವಾದ ತಂಡ ಮೊದಲು ಬಳಸಿದ ಮೂರು ಮೊಬೈಲ್ ಸಂಖ್ಯೆಯನ್ನು ನಿಷ್ಕ್ರಿಯಗೊಳಿಸಿದೆಯಲ್ಲದೆ, ಬೆದರಿಕೆಗೆ ತುತ್ತಾದ ವಿದ್ಯಾರ್ಥಿಯನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬ್ಲಾಕ್ ಮಾಡಿದೆ.
ಇತ್ತ ವಂಚನಾ ಜಾಲದ ಸುಳಿಗೆ ಸಿಲುಕಿ ಭಯಭೀತನಾಗಿದ್ದ ವಿದ್ಯಾರ್ಥಿಗೆ ಪೊಲೀಸ್ ಅಧಿಕಾರಿಗಳು ಯಾವುದೇ ತಪ್ಪು ನಿರ್ಧಾರ ತಳೆಯದಂತೆ ಮಾನಸಿಕ ಧೈರ್ಯ ತುಂಬಿ, ಆತನ ಬಗ್ಗೆ ನಿಗಾವಹಿಸಲಾಗಿತ್ತು.
ತಮಗೆ ತಿಳಿಯದಂತೆ ವಿಡಿಯೋ ಕರೆ ಸ್ವೀಕರಿಸಿದ ಮಾತ್ರಕ್ಕೆ ತಮ್ಮ ಅಶ್ಲೀಲ ವಿಡಿಯೋವೊಂದು ಸಿದ್ದವಾಗಿ ಅದನ್ನು ತಮ್ಮ ಮಾನಹಾನಿಗೆ ಬಳಸುವ ಬೆದರಿಕೆಯೊಡ್ಡುವ, ಆ ಮೂಲಕ ಹಣಕ್ಕಾಗಿ ಪೀಡಿಸುವ ಜಾಲಗಳು ಸಕ್ರಿಯವಾಗಿದ್ದು, ಈ ಜಾಲಕ್ಕೆ ಸಿಲುಕಿದರೂ ಭಯಪಡದೆ ಪೊಲೀಸ್ ಇಲಾಖೆಯ ಸೈಬರ್ ಕ್ರೈಮ್ ಸಂಖ್ಯೆ 1930 ಕ್ಕೆ ತಕ್ಷಣವೇ ಸಂಪರ್ಕಿಸಿ ಸಹಾಯ ಯಾಚಿಸಬಹುದೆಂದು ಪೊಲೀಸರು ತಿಳಿಸಿದ್ದಾರೆ.