ಬೆಂಗಳೂರು: ಬೀದಿ ಬದಿ ಮಾರುವ ಮತ್ತು ಹೊರ ರಾಜ್ಯದಿಂದ ಆಮದು ಆಗುವ ಆಹಾರ ಪದಾರ್ಥಗಳನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಿರಂತರವಾಗಿ ಪರೀಕ್ಷೆ ನಡೆಸುತ್ತಿದೆ. ಈಗಾಗಲೆ ಗೋಬಿ, ಪಾನಿಪುರಿ ಸೇರಿದಂತೆ ಅನೇಕ ತಿನಿಸುಗಳಿಗೆ ಬಳಸುವ ಮಸಾಲೆ ಪದಾರ್ಥಗಳು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತವೆ ಎಂದು ತಿಳಿಸಿದೆ. ಇದೀಗ, ಕೇರಳದಿಂದ ಆಮದು ಆಗುವ ಖಾರಾ ಮಿಕ್ಚರ್, ಚಿಪ್ಸ್, ಹಲ್ವಾ, ಮುರುಕು, ರಸ್ಕ್, ಡ್ರೈ ಫ್ರೂಟ್ಸ್ ಸೇರಿದಂತೆ 31 ಪದಾರ್ಥಗಳಲ್ಲಿ ಕೃತಕ ಬಣ್ಣ ಬಳಸಲಾಗುತ್ತಿದೆ. ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂದು ಇಲಾಖೆ ತಿಳಿಸಿದೆ.
ಕಳೆದ ಮೂರು ತಿಂಗಳುಗಳಲ್ಲಿ ಕೇರಳದಿಂದ ರಾಜ್ಯದ ಗಡಿ ಜಿಲ್ಲೆಯಾದ ಕೊಡಗು ಜಿಲ್ಲೆಯಲ್ಲಿ ಮಾರಾಟವಾಗುತ್ತಿದ್ದ ಖಾರಾ ಮಿಕ್ಚರ್, ಚಿಪ್ಸ್, ಹಲ್ವಾ, ಮುರುಕು, ರಸ್ಕ್, ಡ್ರೈ ಫೂಟ್ಸ್ಗಳು, ಸಿಹಿತಿಂಡಿಗಳು ಸೇರಿದಂತೆ ಹಲವು ವಿಧದ ಆಹಾರ ಪದಾರ್ಥಗಳ 90 ಮಾದರಿಗಳನ್ನು ಸಂಗ್ರಹಿಸಿ ಇಲಾಖೆ ಪರಿಶೀಲನೆ ನಡೆಸಿದೆ.
ಅವುಗಳಲ್ಲಿ 31 ಮಾದರಿಗಳಿಗೆ Alura Red, Carmoisine, Tartrazine, Sunset Yellow ಸೇರಿದಂತೆ ಕೃತಕ ಬಣ್ಣಗಳನ್ನು ಬಳಸಿರುವುದು ವಿಶ್ಲೇಷಣಾ ಫಲಿತಾಂಶದಲ್ಲಿ ಖಚಿವಾಗಿದೆ. ಅಲ್ಲದೇ, ಹಲವಾರು ಆಹಾರ ಪದಾರ್ಥಗಳ ಪೊಟ್ಟಣಗಳ ಮೇಲೆ ತಯಾರಿಕಾ ದಿನಾಂಕ, ತಯಾರಿಕೆ ಮಾಡುವವರ ವಿವರಗಳು ಇಲ್ಲದೆ ಇರುವುದು, ತಯಾರಿಕಾ ದಿನಾಂಕವನ್ನು ನಮೂದು ನೊಂದಣಿ/ಪರವಾನಿಗೆ ಸಂಖ್ಯೆ ಮುದ್ರಿತವಾಗಿಲ್ಲ.
ಈ ಎಲ್ಲ ಪದಾರ್ಥಗಳು ಆರೋಗ್ಯಕ್ಕೆ ಹಾನಿಕಾರಕ. ಹೀಗಾಗಿ, ಈ ಪದಾರ್ಥಗಳನ್ನು ತಯಾರಿಸುವ ತಯಾರಿಕ ಘಟಕಗಳ ಮೇಲೆ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಆಹಾರ ಸುರಕ್ಷತೆ ಮತ್ತು ಗಣಮಟ್ಟ ಇಲಾಖೆ ಆಯುಕ್ತರಿಗೆ ಮತ್ತು ಕೇರಳ ರಾಜ್ಯ ಸರ್ಕಾರಕ್ಕೆ ಅಧಿಕಾರಿಗಳು ಪತ್ರ ಬರೆದಿದ್ದಾರೆ.