ಹಾಸನ, ನವೆಂಬರ್ 10: ಗಡ್ಡ ತೆಗೆಯುವಂತೆ ಆಡಳಿತ ಮಂಡಳಿ ತಮಗೆ ಸೂಚನೆ ನೀಡಿದೆ ಅಂತ 13ಕ್ಕೂ ಹೆಚ್ಚು ಮುಸ್ಲಿಂ ವಿದ್ಯಾರ್ಥಿಗಳು ಟ್ವೀಟ್ ಮೂಲಕ ಹೊಳೆನರಸೀಪುರ ಸರ್ಕಾರಿ ನರ್ಸಿಂಗ್ ಕಾಲೇಜಿನವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಈ ವಿಚಾರವಾಗಿ ಕಾಲೇಜು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ನಡುವೆ ಸಂಘರ್ಷ ಏರ್ಪಟ್ಟಿದೆ.
ಪಿಎಂಎಸ್‌ಎಸ್ ಯೋಜನೆಯಡಿ ನರ್ಸಿಂಗ್ ಓದಲು ಜಮ್ಮು-ಕಾಶ್ಮೀರದಿಂದ 13ಕ್ಕೂ ಹೆಚ್ಚು ಮುಸ್ಲಿಂ ಯುವಕರು ಹೊಳೆನರಸೀಪುರಕ್ಕೆ ಬಂದಿದ್ದಾರೆ. ವಿದ್ಯಾರ್ಥಿಗಳು ಹೊಳೆನರಸೀಪುರ ಸರ್ಕಾರಿ ನರ್ಸಿಂಗ್ ಕಾಲೇಜೀನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಗಡ್ಡ ತೆಗೆದು ಕಾಲೇಜು ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮೌಖಿಕವಾಗಿ ಸೂಚನೆ ನೀಡಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ. ಆದರೆ, ಗಡ್ಡ ತೆಗೆಯಲು ವಿದ್ಯಾರ್ಥಿಗಳು ನಿರಾಕರಿಸಿದ್ದಾರೆ.
“ನಮ್ಮ ಸಂಪ್ರದಾಯದಂತೆ ಗಡ್ಡ ಬಿಡುವುದು ನಮ್ಮ ಹಕ್ಕು. ಗಡ್ಡ ತೆಗೆಯುವಂತೆ ಸೂಚನೆ ನೀಡಿದ್ದು, ನಮ್ಮ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತಿದೆ. ಕೂಡಲೇ ಮಧ್ಯಪ್ರವೇಶಿಸಿ ಸಮಮಸ್ಯೆ ಬಗೆಹರಿಸುವಂತೆ” ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮ ಎಕ್ಸ್ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಹಾಗೂ ಅಲ್ಲಿನ ಪ್ರಮುಖ ನಾಯಕರಿಗೆ ಮನವಿ ಮಾಡಿದ್ದಾರೆ. ಅಲ್ಲದೇ, ವಿದ್ಯಾರ್ಥಿಗಳು ಜಮ್ಮು-ಕಾಶ್ಮೀರ ಸ್ಟುಡೆಂಟ್ಸ್ ಅಸೋಸಿಯೇಷನ್ ಮುಂದೆಯೂ ಮೊರೆ ಇಟ್ಟಿದ್ದಾರೆ.