ಪೆರುವಾಜೆ : ಪ್ರತಿಯೊಬ್ಬ ಸಾಧಕನ ಹಿಂದೆ ವಿದ್ಯೆಯ ಪಾತ್ರ ಮುಖ್ಯವಾದದು. ಹೀಗಾಗಿ ಅಕ್ಷರ ಕಲಿಸಿದ ವಿದ್ಯಾಸಂಸ್ಥೆಯನ್ನು ಎಂದಿಗೂ ಮರೆಯದೇ ಅದರೊಂದಿಗೆ ಸದಾ ಕಾಲ ಸಂಬಂಧ ಇರಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಹಿರಿಯ ವಿದ್ಯಾರ್ಥಿ ಸಂಘವೂ ಸಂಸ್ಥೆಯ ಜತೆಗೆ ಸುದೀರ್ಘ ಒಡನಾಟ ಇರಿಸಿಕೊಳ್ಳಲು, ಅದರ ಬೆಳವಣಿಗೆಗೂ ಕೊಡುಗೆ ನೀಡಲು ಉತ್ತಮ ವೇದಿಕೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ನ.9 ರಂದು ಬೆಳ್ಳಾರೆ ಡಾ|ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಇದರ ಹಿರಿಯ ವಿದ್ಯಾರ್ಥಿ ಸಂಘದ ನೂತನ ಸಮಿತಿಯ ಪದಗ್ರಹಣ ಮತ್ತು ನೂತನ ಕಚೇರಿಯ ಉದ್ಘಾಟನೆಯ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ, ಸಮಾಜಕ್ಕೆ ಪೂರಕವಾದ ಯೋಜನೆ, ಯೋಚನೆಗಳನ್ನು ಅನುಷ್ಟಾನಿಸುವಲ್ಲಿ ಯುವ ಸಮುದಾಯಕ್ಕೆ ಸಾಮರ್ಥ್ಯ ಇದೆ. ಯುವ ಶಕ್ತಿಯನ್ನು ಒಳಗೊಂಡಿರುವ ಬೆಳ್ಳಾರೆ ಪದವಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘವೂ ಈ ಕಾಲೇಜಿನ ಅಭಿವೃದ್ಧಿಗೆ ಸಹಕಾರಿಯಾಗಲಿ ಎಂದರು.
ಸಂಪನ್ಮೂಲ ವ್ಯಕ್ತಿ, ಸವಣೂರು ವಿದ್ಯಾರಶ್ಮಿ ಸ್ವತಂತ್ರ ಪ.ಪೂ. ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ ಮಾತನಾಡಿ, ಬೆಳ್ಳಾರೆ ಪದವಿ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಸಂಘಟನೆಯ ಮೂಲಕ ತನ್ನ ದೂರದೃಷ್ಟಿತ್ವದ ಚಿಂತನೆಗಳ ಅನುಷ್ಟಾನಕ್ಕೆ ಮುಂದಡಿ ಇಟ್ಟಿದೆ. ಈ ತಂಡದ ಉತ್ಸಾಹ ಗಮನಿಸಿದರೆ ಕಾಲೇಜಿನ ಕೊರತೆಗಳನ್ನು ತುಂಬುವ ನಿಟ್ಟಿನಲ್ಲಿ ಈ ಸಂಘವೂ ಆಶಾದಾಯಕವಾಗಿ ಕೆಲಸ ಮಾಡಲಿದೆ ಎಂದರು.
ಸಂಘ ಸ್ಥಾಪಿಸುವುದು ಸುಲಭ. ಅದನ್ನು ಮುಂದುವರಿಸಿಕೊಂಡು ಹೋಗುವುದು ಕಷ್ಟ. ಈ ಸೂಕ್ಷ್ಮ ಸಂಗತಿಯನ್ನು ಅರ್ಥೈಸಿಕೊಂಡು ಹೆಜ್ಜೆ ಇಡಬೇಕಾದ ಕಾಲಘಟ್ಟ ಇದಾಗಿದ್ದು ಸಂಘ ಯಾವತ್ತೂ ಇತಿಹಾಸದ ಪುಟ ಸೇರದೆ ನಿರಂತರ ಚಟುವಟಿಕೆಯಿಂದ ಕೂಡಿರಬೇಕು. ಇದಕ್ಕೆ ಪದಾಧಿಕಾರಿಗಳ ಜತೆಗೆ ಎಲ್ಲ ಹಿರಿಯ ವಿದ್ಯಾರ್ಥಿಗಳ ಸಹಕಾರದ ಅಗತ್ಯ ಇದೆ ಎಂದು ಕೇವಳ ಅವರು ಅಭಿಪ್ರಾಯಿಸಿದರು.
ಪದಾಧಿಕಾರಿಗಳ, ಸದಸ್ಯರ ವರ್ತನೆ, ಸಂಭಾಷಣೆಯನ್ನು ಇದಕ್ಕೆ ಪೂರಕವಾಗಿ ಜೋಡಿಸಿಕೊಂಡರೆ ಸಂಘ ಬೆಳೆಯುತ್ತದೆ. ಬಹುತೇಕ ಸರಕಾರಿ ಕಾಲೇಜುಗಳಲ್ಲಿ ಮೂಲ ಸೌಕರ್ಯ ಇದೆ. ಆದರೆ ಸಂಯೋಜನೆಯಲ್ಲಿ ಕೊರತೆಗಳು ಇವೆ. ಈ ಎಲ್ಲ ಸಂಗತಿಗಳನ್ನು ಅರಿತುಕೊಂಡು ಬೆಳ್ಳಾರೆ ಕಾಲೇಜಿನ ಅಗತ್ಯತೆಗಳಿಗೆ ಹಿರಿಯ ವಿದ್ಯಾರ್ಥಿ ಸಂಘ ಸ್ಪಂದಿಸುವ ಕಾರ್ಯ ಮಾಡಲಿ ಎಂದು ಸೀತಾರಾಮ ಕೇವಳ ಹೇಳಿದರು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಕ್ಷಿತ್ ಕುಮಾರ್ ಪೆರುವಾಜೆ ಮಾತನಾಡಿ, ಮೂರು ತಿಂಗಳ ಹಿಂದೆ ನಡೆದ ಹಿರಿಯ ವಿದ್ಯಾರ್ಥಿ ಸಂಘದ ಸಭೆಯಲ್ಲಿ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು. ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಕಾಂತರಾಜು ಸಿ ಅವರು ಸಂಘದ ನೋಂದಣಿಗೆ ಪೂರ್ಣ ಸಹಕಾರ ನೀಡಿದರು. ಈ ಸಂಸ್ಥೆಯಲ್ಲಿ ಹತ್ತಾರು ಸಾಧಕ ವಿದ್ಯಾರ್ಥಿಗಳಿದ್ದು ಅವರೆಲ್ಲರಿಗೂ ಪ್ರೋತ್ಸಾಹ ನೀಡುವ ಕೆಲಸವನ್ನು ಹಿರಿಯ ವಿದ್ಯಾರ್ಥಿ ಸಂಘ ಮಾಡಲಿದೆ. ಮುಂದಿನ ದಿನಗಳಲ್ಲಿ ನೂತನ ಕ್ಯಾಂಟಿನ್ ನಿರ್ಮಾಣದ ಉದ್ದೇಶ ಹೊಂದಲಾಗಿದ್ದು ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದರು.
ಡಾ|ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೋ. ಬಾಲಸುಬ್ರಹ್ಮಣ್ಯ ಪಿ.ಎಸ್. ಅಧ್ಯಕ್ಷತೆ ವಹಿಸಿ ಮಾತನಾಡಿ, ನಾನು ಕೆಲ ದಿನಗಳ ಹಿಂದೆಯಷ್ಟೇ ಕಾಲೇಜಿಗೆ ಬಂದಿದ್ದು ಇಲ್ಲಿನ ಹಿರಿಯ ವಿದ್ಯಾರ್ಥಿ ಸಂಘದ ಚಟುವಟಿಕೆ ಗಮನಿಸಿದ್ದೇನೆ. ಸಂಘಕ್ಕೆ ಕಾಲೇಜಿನಿಂದ ಪೂರ್ಣ ಸಹಕಾರ ನೀಡಲಾಗುವುದು ಎಂದರು.
ದ.ಕ.ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಅವರು ನೂತನ ಕಚೇರಿ ಉದ್ಘಾಟಿಸಿ ಶುಭ ಹಾರೈಸಿದರು. ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗಾ ಇದರ ಅದ್ಯಕ್ಷೆ ಉಷಾ ಬಿ. ಭಟ್, ಹಿರಿಯ ವಿದ್ಯಾರ್ಥಿ ಸಂಘದ ನಿಕಟಪೂರ್ವ ಅಧ್ಯಕ್ಷ ವಾಸುದೇವ ಪಿ ಶುಭ ಹಾರೈಸಿದರು.
ಹಿರಿಯ ವಿದ್ಯಾರ್ಥಿ ಸಂಘದ ಸಂಚಾಲಕ ಗಿರೀಶ್ ಸಿ.ಆರ್.ಪ್ರಾಸ್ತಾವಿಸಿದರು. ಕಾರ್ಯದರ್ಶಿ ಅನುರಾಜ್ ಸಿ.ಬಿ.ಸ್ವಾಗತಿಸಿ, ಉಪಾಧ್ಯಕ್ಷ ರಜನೀಶ್ ಸವಣೂರು ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಶಿವಪ್ರಸಾದ್ ಪೆರುವಾಜೆ ನಿರೂಪಿಸಿದರು. ಗೌರವ ಸಲಹೆಗಾರ ಬ್ರಿಜೇಶ್ ರೈ, ಖಜಾಂಜಿ ಯಶೋಧಾ ಪೆರುವಾಜೆ, ಜತೆ ಕಾರ್ಯದರ್ಶಿ ಶಿಲ್ಪ ಕೆ.ಎನ್., ಕಾರ್ಯಾಕಾರಿ ಸಮಿತಿ ಸದಸ್ಯರಾದ ಡಾ|ಸಂದೀಪ್ ಕುಮಾರ್, ರಂಜಿತ್ ಡಿ ಉಪಸ್ಥಿತರಿದ್ದರು.
ಕಾರಂತರ ಪ್ರತಿಮೆಗೆ ಮಾಲಾರ್ಪಣೆ
ಇದೇ ಸಂದರ್ಭದಲ್ಲಿ ಕಾಲೇಜಿನ ಆವರಣದಲ್ಲಿರುವ ಕಡಲ ತಡಿಯ ಭಾರ್ಗವ ಡಾ| ಕೆ. ಶಿವರಾಮ ಕಾರಂತ ಅವರ ಪ್ರತಿಮೆಗೆ ಸೀತಾರಾಮ ಕೇವಳ ಅವರು ಮಾರ್ಲಾಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಚೆಂಡೆ ವಾದನದ ಮೂಲಕ ಬರಮಾಡಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಕಾಲೇಜಿನ ಅಗತ್ಯತೆಗಳ ಕುರಿತಾಗಿ ವಿವಿಧ ಬೇಡಿಕೆಗಳ ಪಟ್ಟಿಯನ್ನು ಶಾಸಕರಿಗೆ ಸಲ್ಲಿಸಲಾಯಿತು.