ಬಂಟ್ವಾಳ : ಹಿಂದೂ ಜಾಗರಣ ವೇದಿಕೆಯ ನ್ಯಾಯ ಜಾಗರಣದ ಜಿಲ್ಲಾ ಸಂಯೋಜಕರು ಹಾಗೂ ವಕೀಲರಾದ ರಾಜೇಶ್ ಬೊಳ್ಳುಕಲ್ಲು ರವರ ಮೇಲೆ ಒಂದು ವರ್ಷಗಳಿಂದ ಹಲ್ಲೆ ಯತ್ನ ಹಾಗೂ ಕೊಲೆ ಬೆದರಿಕೆಯ ವಿಷಯವಾಗಿ ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲೆಯಿಂದ ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷರಿಗೆ ಹಾಗೂ ಬಂಟ್ವಾಳ ಉಪಕೇಂದ್ರದ ಉಪ ಪೊಲೀಸ್ ವರಿಷ್ಠರಿಗೆ ದೂರು ನೀಡಲಾಯಿತು.
ಇತ್ತೀಚಿಗೆ ನಡೆದ ಗ್ರಾಮ ಪಂಚಾಯತ್ ಚುನಾವಣಾ ಸಂದರ್ಭದಲ್ಲಿ ರಾಜೇಶ್ ಬೊಳ್ಳುಕಲ್ಲು ರವರು ವ್ಯಾಟ್ಸಾಪ್ ಸ್ಟೇಟಸ್ ನಲ್ಲಿ ಒಳ್ಳೆಯವರನ್ನು ಹಾಗೂ ಉತ್ತಮ ಸಂಸ್ಕಾರವಿರುವ ಪ್ರತಿನಿಧಿಗಳನ್ನು ಆರಿಸುವಂತೆ
ಬರೆದಿಕೊಂಡಿದ್ದು, ಈ ವಿಚಾರವನ್ನು ಇಟ್ಟುಕೊಂಡು ಸ್ಥಳೀಯ ಕೆಲ ಯುವಕರು ರಾಜೇಶ್ ರವರನ್ನು
ಅವ್ಯಾಚ ಶಬ್ದಗಳಿಂದ ನಿಂದಿಸಿ ಅವಮಾನಿಸಿರುತ್ತಾರೆ. ನಂತರದ ದಿನಗಳಲ್ಲಿ ರಾಜೇಶ್ ರವರು ಕಛೇರಿಗೆ ತೆರಳುತ್ತಿರುವ ಸಮಯದಲ್ಲಿ ಬಹಿರಂಗವಾಗಿ ದುರುಗುಟ್ಟಿ ನೋಡುವುದರ ಜೊತೆಗೆ ಹಲ್ಲೆ ಮಾಡುತ್ತೇವೆಂದು
ಎಲ್ಲಾ ಕಡೇ ಹೇಳಿಕೊಂಡು ಬರುತ್ತಿದ್ದರು. ಹಾಗೆಯೇ ಇವರು ಕಛೇರಿಯಿಂದ ಮನೆಗೆ ಹೋಗುವ ದಾರಿಯಲ್ಲಿ
ಕೆಲ ಯುವಕರು ಅವರ ಕಾರನ್ನು ಮಣಿಹಳ್ಳದಿಂದ
ಹಿಂಬಾಲಿಸಿಕೊಂಡು ಬಂದು ಮಣಿನಾಲ್ಕೂರು ಗ್ರಾಮದ ಪೂಪಾಡಿಕಟ್ಟೆಯಲ್ಲಿ ಅಡ್ಡಗಟ್ಟಿ ನಿಲ್ಲಿಸಿ ಹಲ್ಲೆಗೆ ಯತ್ನಿಸಿರುತ್ತಾರೆ.ಈ ವಿಚಾರವಾಗಿ ರಾಜೇಶ್ ರವರು ವೀಡಿಯೋ ಸಮೇತವಾಗಿ ಪೋಲೀಸ್ ಇಲಾಖೆಗೆ ದೂರು ನೀಡಿರುತ್ತಾರೆ.ಆದರೆ ಅದೇ ದಿವಸ ರಾತ್ರಿ ರಾಜೇಶ್ ರವರ ಮೇಲೆ ಸುಳ್ಳು ಪ್ರಕರಣವನ್ನು ದಾಖಲಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ರಾಜೇಶ್ ರವರ ಊರಿನ ಎಲ್ಲಾ ಶುಭ ಕಾರ್ಯಕ್ರಮದಲ್ಲಿ ಯುವಕರ ತಂಡವೂ ರಾಜೇಶ್ ರವರನ್ನು ಬಹಿರಂಗ ತಮಾಷೆ ಮಾಡುವುದು, ಕೈಯಲ್ಲಾಗದವನು ಎಂದು ಹೇಳಿಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದು, ಈ
ಅವಮಾನಗಳನ್ನು ಇವರು ಇಲ್ಲಿಯವರಿಗೆ ಸಹಿಸಿಕೊಂಡಿರುತ್ತಾರೆ. ಕೆಲವು ದಿನಗಳ ಹಿಂದೆ ಇವರ ಕುಟುಂಬದ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೊರೋನಾ ಪೀಡಿತರು ಎಂದು ಬರೆದು ಸುಳ್ಳು ಸುದ್ದಿ ಹಬ್ಬಿಸಿ ಇವರ ಕುಟುಂಬದ ಮಾನ ಹರಾಜಿಗೆ ಪ್ರಯತ್ನ ಪಟ್ಟಿರುತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಜೂ.07 ರಂದು ಸಂಜೆ ರಾಜೇಶ್ ಹಾಗೂ ಅವರ ಪತ್ನಿ ಅವರ ತೋಟದ ಕಡೆ ಹೋಗಿ ಕಾರಿನಲ್ಲಿ ಹಿಂದಿರುಗಿ ಬರುತ್ತಿರುವಾಗ ಯುವಕರ ತಂಡ ಹೆಂಡತಿಯ ಎದುರಲ್ಲೇ ಕಾರನ್ನು
ಅಡ್ಡಗಟ್ಟಿ ಹಲ್ಲೆಗೆ ಯತ್ನಿಸಿ ಕಾರಿನ ಗಾಜು ಹಾಗೂ ಹಲವು ಭಾಗಗಳನ್ನು ಜಖಂ ಗೊಳಿಸಿದ್ದಾರೆ ಹಾಗೂ
ರಾಜೇಶ್ ರವರ ತಂದೆಯ ಎದುರಲ್ಲೇ ನಿಮ್ಮ ಮಗನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಈ ಪರಿಸರದಲ್ಲಿ ಗೂಂಡಾಗಳ ರೀತಿ ವರ್ತಿಸುತ್ತಿರುವ ಅಭಿಷೇಕ್ ಸುವರ್ಣ, ಗಿರೀಶ್,ಲತೀಶ್ ಮತ್ತು ಸಹಚರರ ಅವ್ಯವಹಾರ ಹಾಗೂ ಗೂಂಡಾಗಿರಿಯ
ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಿದೇ ಇದ್ದಲ್ಲಿ ಮುಂದೆ ಆಗುವ ಅನಾಹುತಕ್ಕೆ ಇಲಾಖೆಯೇ ಕಾರಣವಾಗಬಹುದು.ಆದ್ದರಿಂದ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈ ಗೊಳ್ಳಬೇಕು ಎಂದು ಹಿಂದೂ ಜಾಗರಣ ವೇದಿಕೆಯ ಜಿಲ್ಲಾಧ್ಯಕ್ಷರಾದ ಜಗದೀಶ್ ನೆತ್ತರಕೆರೆ, ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಶೆಟ್ಟಿ ಮಾಣಿ, ಜಿಲ್ಲಾ ಹಿಂದೂ ಯುವವಾಹಿನಿ ಸಂಯೋಜಕ್ ಪ್ರಶಾಂತ್ ಕೆಂಪುಗುಡ್ಡೆ, ಜಿಲ್ಲಾ ಕಾರ್ಯದರ್ಶಿ ಚಂದ್ರ ಕಲಾಯಿ ದೂರಿನಲ್ಲಿ ತಿಳಿದ್ದಾರೆ.