ಕಡಬ ತಾಲೂಕಿನ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಾರ್ತಿಕ ಬಹುಳ ದ್ವಾದಶಿಯಾದ ಬುಧವಾರ ಕೊಪ್ಪರಿಗೆ ಏರುವುದರ ಮೂಲಕ ಚಂಪಾಷಷ್ಠಿ ಜಾತ್ರಾ ಮಹೋತ್ಸವ ಆರಂಭವಾಯಿತು. ಎಲ್ಲಾ ಕ್ಷೇತ್ರಗಳಲ್ಲಿ ಧ್ವಜಾರೋಹಣ (ಕೊಡಿ ಏರುವುದು) ಮೂಲಕ ಜಾತ್ರೆ ಆರಂಭವಾದರೆ, ಕುಕ್ಕೆ ಕ್ಷೇತ್ರದಲ್ಲಿ ಮಾತ್ರ ಕೊಪ್ಪರಿಗೆ ಏರುವುದರೊಂದಿಗೆ ವಾರ್ಷಿಕ ಜಾತ್ರೋತ್ಸವ ಪ್ರಾರಂಭಗೊಳ್ಳುತ್ತದೆ.
ಮುಂಜಾನೆ 7.42ರ ವೃಶ್ಚಿಕ ಲಗ್ನ ಸುಮುಹೂರ್ತದಲ್ಲಿ ಅವಳಿ ಕೊಪ್ಪರಿಗೆಗಳನ್ನು ಏರಿಸಲಾಯಿತು. ಪೂರ್ವಶಿಷ್ಠ ಸಂಪ್ರದಾಯದಂತೆ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ವೈದಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಆರಂಭದಲ್ಲಿ ಪ್ರಧಾನ ಅರ್ಚಕರು `ರಾಮಲಕ್ಷ್ಮಣ’ ಎಂಬ ಹೆಸರಿನ ಜೋಡಿ ಅನ್ನದ ಕೊಪ್ಪರಿಗೆಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವಳದ ಒಳಾಂಗಣದಲ್ಲಿರುವ ದೊಡ್ಡದಾದ ಎರಡು ಒಲೆಗಳ ಮೇಲೆ ಕೊಪ್ಪರಿಗೆಗಳನ್ನು ಏರಿಸಲಾಯಿತು.
ಈ ಸಂದರ್ಭ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕಳ,ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಕಡಬ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಮಾಸ್ಟರ್‌ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಅಚ್ಚುತ ಆಲ್ಕಬೆ, ಕಚೇರಿ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಹೆಬ್ಬಾರ್ ಪ್ರಸನ್ನ ಭಟ್, ಪಾಟಾಳಿ ಲೋಕೇಶ್ ಎ.ಆರ್ ಸೇರಿದಂತೆ ದೇವಳದ ಸಿಬ್ಬಂದಿಗಳು, ಭಕ್ತರು ಉಪಸ್ಥಿತರಿದ್ದರು.
ಕ್ಷೇತ್ರದಲ್ಲಿ ಅಖಂಡ ಭಜನೋತ್ಸವಕ್ಕೆ ಚಾಲನೆ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಧರ್ಮಸಮ್ಮೇಳನ ಮಂಟಪದಲ್ಲಿ ಜಾತ್ರೋತ್ಸವದ ಅಂಗವಾಗಿ ಏಕಹಃ ಭಜನೆ ಅಖಂಡ ಭಜನೋತ್ಸವ ಆರಂಭಗೊಂಡಿತು. ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ದೀಪ ಬೆಳಗುವ ಮೂಲಕ ಭಜನೋತ್ಸವಕ್ಕೆ ಚಾಲನೆ ನೀಡಿದರು. ಬುಧವಾರ ಸೂರ್ಯೋದಯದ ಸಮಯದಲ್ಲಿ ಆರಂಭಗೊಂಡ ಭಜನೆಯು ಗುರುವಾರ ಸೂರ್ಯೋದಯದ ಸಮಯ ಮಂಗಳವಾಗಲಿದೆ.ಆರಂಭದಲ್ಲಿ ಶ್ರೀ ದೇವಳದ ನೌಕರರ ವೃಂದದಿಂದ ಭಜನಾ ಸೇವೆ ನೆರವೇರಿತು. 24 ಗಂಟೆ 24 ತಂಡಗಳಿಂದ ಭಜನಾ ಸೇವೆ ನೆರವೇರಲಿದೆ.