ರಾಕ್‌ಸ್ಟಾರ್ ಖ್ಯಾತಿಯ ಬಾಲಿವುಡ್ ನಟಿ ನರ್ಗಿಸ್ ಫಕ್ರಿ ಅವರ ಸಹೋದರಿ ಅಲಿಯಾ ಫಕ್ರಿ ಅವರನ್ನು ನ್ಯೂಯಾರ್ಕ್ನ ಕ್ವಿನ್ಸ್ನಲ್ಲಿ ಬಂಧಿಸಲಾಗಿದೆ. ಉದ್ದೇಶ ಪೂರ್ವಕವಾಗಿ ಮಾಜಿ ಗೆಳೆಯನ ಉಸಿರು ನಿಲ್ಲಿಸಿದ್ದಾಳೆ ಎನ್ನುವ ಆರೋಪದಲ್ಲಿ ಅಲಿಯಾ ಫಕ್ರಿಯನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಅಲಿಯಾ ಫಕ್ರಿ ಅವರು ಎರಡು ಅಂತಸ್ತಿನ ಗ್ಯಾರೇಜ್ಗೆ ಬೆಂಕಿ ಹಚ್ಚಿದ ಕಾರಣ ಉಸಿರಾಡಲು ಆಗದೇ ಒಳಗಿದ್ದಂತಹ ಎಡ್ವರ್ಡ್ ಜೇಕಬ್ಸ್ (35) ಮತ್ತು ಯುವತಿ ಅನಸ್ತಾಸಿಯಾ ಎಟಿಯೆನ್ನೆ (33) ಕೊನೆಯುಸಿರೆಳೆದಿದ್ದಾರೆ. ಗ್ಯಾರೇಜ್ಗೆ ಬಂದ ಅಲಿಯಾ ಫಕ್ರಿ ಮುಖ್ಯ ಬಾಗಿಲಿಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಇದರಿಂದ ಕ್ಷಣಾರ್ಧದಲ್ಲೇ ಅಗ್ನಿ ಇಡೀ ಕಟ್ಟಡವನ್ನೇ ವ್ಯಾಪಿಸಿಕೊಂಡಿದೆ. ಈ ವೇಳೆ ಒಳಗಿದ್ದ ಇಬ್ಬರು ಹೊರಗೆ ಬರಲು ಸಾಕಷ್ಟು ಪ್ರಯತ್ನ ಪಟ್ಟರು.
ಆದರೆ ಇಡೀ ಗ್ಯಾರೇಜ್ಗೆ ಒಂದೇ ಒಂದು ಬಾಗಿಲು ಇದ್ದಿದ್ದರಿಂದ ಇಬ್ಬರು ಹೊರಗಡೆ ಬರಲು ಆಗಲಿಲ್ಲ. ಹೀಗಾಗಿ ಹೊಗೆ ಹೆಚ್ಚಾಗಿದ್ದರಿಂದ ಉಸಿರಾಡಲು ಆಗದೇ ಬೆಂಕಿಯಿಂದ ಇಬ್ಬರು ಸಜೀವ ದಹನಗೊಂಡಿದ್ದಾರೆ ಎಂದು ವರದಿ ಮಾಡಲಾಗಿದೆ. ಸದ್ಯ ಈ ಸಂಬಂಧ ಬಾಲಿವುಡ್ ನಟಿ ನರ್ಗಿಸ್ ಫಕ್ರಿ ಅವರ ಸಹೋದರಿ ಅಲಿಯಾ ಫಕ್ರಿ ಅವರನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ.
ಇನ್ನು ಈ ಬಗ್ಗೆ ನಟಿ ನರ್ಗಿಸ್ ಫಕ್ರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಅವರ ತಾಯಿ ಈ ಕುರಿತು ಮಾತನಾಡಿದ್ದು, ಅವಳು ಅಂತಹ ಕೆಲಸ ಮಾಡುವಂತವಳು ಅಲ್ಲ. ಹಿಂಸೆಯಿಂದ ಯಾವತ್ತೂ ದೂರ ಇರುತ್ತಿದ್ದಳು. ಇದನ್ನು ನಾನು ನಂಬುವುದಿಲ್ಲ. ಕಾಳಜಿ ಇರುವಂತವಳು, ಸಹಾಯ ಮಾಡುವ ವ್ಯಕ್ತಿತ್ವದವಳು ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.