ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಕ್ರಮ ಗೋಮಾಂಸ ಸಾಗಾಟ ದಂಧೆ ಬೆಳಕಿಗೆ ಬಂದಿದೆ. ಅಮೃತಹಳ್ಳಿ ಮತ್ತು ಚಿಕ್ಕಜಾಲ ಠಾಣಾ ವ್ಯಾಪ್ತಿಯಲ್ಲಿ ಇಂದು (ಡಿಸೆಂಬರ್ 06) ಒಂದೇ ದಿನ ಸುಮಾರು 1.5 ಟನ್ ನಷ್ಟು ಗೋಮಾಂಸ ಪತ್ತೆಯಾಗಿದೆ. ಚಿಕ್ಕಬಳ್ಳಾಪುರದ ಅಲ್ಲಿಪುರ ಕಸಾಯಿಖಾನೆಯಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ ವಾಹನಗಳನ್ನು ಪೊಲೀಸರು ಅಡ್ಡಗಟ್ಟಿ ಹಿಡಿದಿದ್ದಾರೆ.
ಕೆ.ಆರ್.ಪುರಂ ಕಡೆಗೆ ಸಾಗಿಸುತ್ತಿದ್ದ ಟವೆರಾ ವಾಹನವನ್ನು ಅಮೃತಹಳ್ಳಿ ಪೊಲೀಸರು, ಹೆಬ್ಬಾಳ ಫ್ಲೈಓವರ್ ಬಳಿ ಅಡ್ಡಗಟ್ಟಿ ಹಿಡಿದಿದ್ದಾರೆ.
6 ಹಸು, 16 ಕರು ವಧೆ ಮಾಡಿ ಮಾಂಸ ಸಾಗಿಸಲಾಗುತ್ತಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ. ಸದ್ಯ ಪೊಲೀಸರು, ಚಾಲಕ ಥವೆರಾ ಖಾನ್ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.
ಇನ್ನೊಂದೆಡೆ ಚಿಕ್ಕಜಾಲ ಠಾಣಾ ವ್ಯಾಪ್ತಿಯಲ್ಲಿ ಕೆಟ್ಟು ನಿಂತಿದ್ದ ಫೋರ್ಡ್ ಕಾರಿನಲ್ಲೂ ಗೋಮಾಂಸ ಪತ್ತೆಯಾಗಿದೆ.
ಸುಮಾರು 500 ಕೆಜಿಯಷ್ಟು ಗೋಮಾಂಸ ಇದ್ದ ಕಾರನ್ನು ಚಿಕ್ಕಜಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಕಾರಿನ ಸಂಖ್ಯೆ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಬಗ್ಗೆ ಚಿಕ್ಕಜಾಲ ಮತ್ತು ಅಮೃತಹಳ್ಳಿ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಲಾಗಿದ್ದು, ಈ ಬಗ್ಗೆ ಪೊಲೀಸರು ಸಹ ತನಿಖೆ ಕೈಗೊಂಡಿದ್ದಾರೆ.
ಎರಡೂ ವಾಹನಗಳಲ್ಲಿ ಸಿಕ್ಕಿರುವ ಗೋಮಾಂಸವನ್ನು ಒಂದೇ ಕಡೆ ಅಂದರೆ ಚಿಕ್ಕಬಳ್ಳಾಪುರದ ಅಲ್ಲಿಪುರ ಕಸಾಯಿಖಾನೆಯಿಂದ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದ್ದು, ಎಲ್ಲಿಗೆ ಸಾಗಿಸಲಾಗುತ್ತಿತ್ತು? ಇದರ ಹಿಂದೆ ಯಾರು ಇದ್ದಾರೆ? ಎನ್ನುವ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆ.