ಬೆಂಗಳೂರು: ಗಂಡನನ್ನು ಬಿಟ್ಟು ತನ್ನೊಂದಿಗೆ ಬರದಿದಕ್ಕೆ ಕೋಪಗೊಂಡ ಪ್ರಿಯಕರ ಮಹಿಳೆಯನ್ನು ಕೊಂದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ನಲ್ಲೂರ ಹಳ್ಳಿಯಲ್ಲಿ ನಡೆದಿದೆ.
ಮೊವುಹಾ ಮಂಡಲ್ (26) ಹತ್ಯೆಯಾದ ವಿವಾಹಿತೆ. ಮಿಥುನ್ ಮಂಡಲ್ (40) ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ. ಗಂಡನನ್ನ ತೊರೆದು ತನ್ನೊಂದಿಗೆ ಬರದಿದಕ್ಕೆ ಸಿಟ್ಟಿನಿಂದ ವಿವಾಹಿತೆ ಮಹಿಳೆಯನ್ನ ಚಾಕುವಿನಿಂದ ಹತ್ಯೆ ಮಾಡಿದ್ದಾನೆ. ಬಳಿಕ ಬಂಧನ ಭೀತಿಯಿಂದ ತಾನು ಸಹ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
2017ರಲ್ಲಿ ಮದುವೆಯಾಗಿದ್ದ ಮೊವುಹಾ ಮಂಡಲ್ ಮತ್ತು ಹರಿಪಾದ ಮಂಡಲ್ 2021ರಲ್ಲಿ ಕೆಲಸಕ್ಕೆಂದು ದಂಪತಿ ಬೆಂಗಳೂರಿಗೆ ಬಂದಿದ್ದರು. ಮೊವುಹಾ, ಕಾಲೇಜಿನಲ್ಲಿ ಹೌಸ್ ಕೀಪಿಂಗ್ ಕೆಲಸಕ್ಕಿದ್ದಳು. ಅದೇ ಕಾಲೇಜಿನಲ್ಲಿ ಮಿಥುನ್ ಸಹ ಹೌಸ್ ಕೀಪಿಂಗ್ ಸೂಪರ್ ವೈಸರ್ ಆಗಿದ್ದ. ಹೀಗಾಗಿ ಮಿಥುನ್ಗೆ ಮೋವುಹಾ ಮಂಡಲ್ ನ ಪರಿಚಯವಾಗಿದೆ.
ನಂತರ ಮೋವುಹಾ ಮಂಡಲ್ ಗೆ ತನ್ನನ್ನ ಪ್ರೀತಿಸುವಂತೆ ಕೇಳಿಕೊಂಡಿದ್ದ. ಆದ್ರೆ, ತನಗೆ ಮದುವೆಯಾಗಿದೆ ಎಂದು ಮೋವುಹಾ ಹೇಳಿದ್ದಳು. ಆದರೂ ಸಹ ಗಂಡನನ್ನ ತೊರೆದು ತನ್ನ ಜೊತೆ ಇರುವಂತೆ ಮಿಥುನ್ ಒತ್ತಾಯಿಸಿದ್ದಾನೆ. ಆದ್ರೆ, ಮೋವುಹಾ ಮಂಡಲ್ ಒತ್ತಡಕ್ಕೆ ಮಣಿಯದೆ ಗಂಡನನ್ನು ಬಿಟ್ಟು ಬರಲು ನಿರಾಕರಿಸಿದ್ದಾಳೆ.
ಈ ವಿಚಾರ ಕಾಲೇಜು ಆಡಳಿ ಮಂಡಳಿಗೆ ಗೊತ್ತಾಗಿ ಮಿಥುನ್ ನನ್ನ ಕೆಲಸದಿಂದ ತೆಗೆದುಹಾಕಿತ್ತು. ಬಳಿಕ ಮೊವುಹಾ ಸಹ ಕೆಲಸ ಬಿಟ್ಟಿದ್ದಳು. ಆದರೂ ಸಹ ಮಿಥುನ್, ಮೊವುಹಾಗೆ ಕರೆ ಮಾಡಿ ತೊಂದರೆ ಕೊಡುತ್ತಿದ್ದ. ಬಳಿಕ ಪ್ರೀತಿಸಿದ್ದ ವಿವಾಹಿತೆಯನ್ನ ಒಲಿಸಿಕೊಳ್ಳಲು ವಿಫಲವಾಗಿ ಆಕೆ ಮೇಲೆ ಹಗೆತನ ಸಾಧಿಸಿದ್ದ ಮಿಥುನ್, ಆಕೆಯನ್ನ ಸಾಯಿಸುವ ಸಂಚು ರೂಪಿಸಿದ್ದ.
ಅದರಂತೆ ಬುಧವಾರ(ಡಿಸೆಂಬರ್ 11) ರಾತ್ರಿ ಪಟ್ಟಂದೂರು ಅಗ್ರಹಾರದ ಐಟಿಪಿಎಲ್ ಹಿಂದಿನ ಗೇಟ್ ರಸ್ತೆ ಮನೆ ಬಳಿ ಆಕೆಯ ಕುತ್ತಿಗೆ ಕೊಯ್ದು ಹತ್ಯೆ ಮಾಡಿ ಪರಾರಿಯಾಗಿದ್ದ. ಬಳಿಕ ವೈಟ್ ಫೀಲ್ಡ್ ಠಾಣೆ ಪೊಲೀಸ್ ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ. ಪೊಲೀಸರ ಬಂಧನದ ಭೀತಿಯಿಂದಾಗಿ ಆರೋಪಿ ಮಿಥುನ್ ಇಂದು(ಡಿಸೆಂಬರ್ 12) ಬೆಳಗ್ಗೆ ನಲ್ಲೂರಹಳ್ಳಿ ಕೆರೆಯ ಮರವೊಂದಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.