ನೆಲಮಂಗಲ: ದೇಶದಾದ್ಯಂತ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ಚರ್ಚೆಯಾಗುತ್ತಿರುವ ಹೊತ್ತಿನಲ್ಲೇ, ಹೆಂಡತಿ, ಮಾವನ ಕಿರುಕುಳಕ್ಕೆ ಬೇಸತ್ತು ಪೊಲೀಸ್ ಕಾನ್‌ಸ್ಟೇಬಲ್ ತಿಪ್ಪಣ್ಣ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದರು. ಇದರ ಬೆನ್ನಲ್ಲೇ ಇದೀಗ ಹೆಂಡತಿಯ ಕಿರುಕುಳ ಆರೋಪದಲ್ಲಿ ಬೆಂಗಳೂರಿನಲ್ಲಿ ಮತ್ತೊಂದು ಸಾವಾಗಿದೆ. ಹೌದು. ಪತ್ನಿಯ ಕಿರುಕುಳ ಹಾಗೂ ಅಕ್ರಮ ಸಂಬಂಧದಿಂದ ಬೇಸತ್ತು ಬಾಲರಾಜ್(41) ಎನ್ನುವ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟ ರಸ್ತೆ ಸಿಲುವೆಪುರದಲ್ಲಿ ಈ ಘಟನೆ ನಡೆದಿದೆ.
18 ವರ್ಷದ ಹಿಂದೆ ಪತ್ನಿ ಕುಮಾರಿಯನ್ನ ಬಾಲರಾಜ್ ಎರಡನೇ ಮದುವೆಯಾಗಿದ್ದರು. ಕಿರುಕುಳದ ಜೊತೆಗೆ ಅಕ್ರಮ ಸಂಬಂಧ ಹೊಂದಿರುವ ಆರೋಪ ಕೂಡ ಮಾಡಲಾಗಿದ್ದು, ಗಲಾಟೆ ನಡೆದಿದೆ. ಗಲಾಟೆ ಬಳಿಕ ಮನೆ ತೊರೆದು ಪತ್ನಿ ತವರು ಸೇರಿದ್ದರು.
ಇತ್ತ ಯಾರು ಇಲ್ಲದ ವೇಳೆ ಮನೆಯ ಫ್ಯಾನ್ಗೆ ನೇಣುಬಿಗಿದು ಕೊಂಡು ಬಾಲರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಬಾಲರಾಜ್ ಗ್ರಾಮಾಂತರ ಭಾಗದಲ್ಲಿ ಕ್ರಿಕೆಟ್ ಪಟುವಾಗಿದ್ದರು. ತನ್ನ ಮೃತದೇಹದ ಜೊತೆ ತಾನು ಪಡೆದಿದ್ದ ಟ್ರೋಫಿ, ಬ್ಯಾಟ್, ಬಾಲ್, ವಿಕೆಟ್ ಇಡುವಂತೆ ಡೆತ್ ನೋಟ್ನಲ್ಲಿ ಉಲ್ಲೇಖಿಸಲಾಗಿದೆ. ಅವರ ಕೊನೆಯ ಆಸೆಯಂತೆ ಶವದ ಪೆಟ್ಟಿಗೆಯಲ್ಲಿ ಎಲ್ಲವನ್ನು ಇಟ್ಟು ಶವ ಸಂಸ್ಕಾರ ಮಾಡಲಾಗಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.