ಮಂಗಳೂರು : ನಿಯಂತ್ರಣ ಕಳೆದುಕೊಂಡ ಕ್ರೇನ್‌ವೊಂದು ಮಗುಚಿ ಬಿದ್ದ ಪರಿಣಾಮ ವಾಹನದ ಆಪರೇಟರ್ ಮೃತಪಟ್ಟ ಘಟನೆ ಬಜಪೆಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಗಮನ ದ್ವಾರದ ಬಳಿ ನಡೆದಿದೆ.
ಮೃತರನ್ನು ಉತ್ತರ ಪ್ರದೇಶದ ಕ್ರೇನ್ ಆಪರೇಟರ್ ಅರುಣ್ ಕುಮಾರ್ ಜಾಧವ್ ಎಂದು ಗುರುತಿಸಲಾಗಿದೆ.
ಕ್ರೇನ್ ಅದ್ಯಪಾಡಿಯಿಂದ ಕೆಂಜಾರ್ ಜಂಕ್ಷನ್ ಕಡೆಗೆ ವಿಮಾನ ನಿಲ್ದಾಣದ ನಿರ್ಗಮನ ಮಾರ್ಗವಾಗಿ ತೆರಳುತ್ತಿತ್ತು. ರಸ್ತೆಯ ಇಳಿಜಾರಿನ ಭಾಗದಲ್ಲಿ ವಾಹನ ನಿಯಂತ್ರಣ ಕಳೆದುಕೊಂಡು 20 ಅಡಿ ಆಳದ ಕಂದಕಕ್ಕೆ ಉರುಳಿದೆ ಎನ್ನಲಾಗಿದೆ.
ಕ್ರೇನ್ ಅಡಿಗೆ ಸಿಲುಕಿಕೊಂಡ ಆಪರೇಟರ್ ಅನ್ನು ಮೇಲೆಕ್ಕೆತ್ತಲು ಸುಮಾರು ಅರ್ಧ ತಾಸು ಕಾರ್ಯಾಚರಣೆ ಮಾಡಲಾಗಿದೆ. ಇನ್ನೊಂದು ಕ್ರೇನ್ ಮೂಲಕ ಮೇಲಕ್ಕೆತ್ತಿ ಅದರಡಿಗೆ ಸಿಲುಕಿಕೊಂಡ ಅಪರೇಟರ್ ಅನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಲಾಯಿತು.
ಘಟನೆಯಲ್ಲಿ ಅರುಣ್ ಕುಮಾರ್ ಅವರಿಗೆ ತೀವ್ರ ಗಾಯಗಳಾಗಿವೆ. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಅರುಣ್ ಕುಮಾರ್ ಸಾವನ್ನಪ್ಪಿದ್ದಾರೆ.ಘಟನೆಗೆ ಸಂಬಂಧಿಸಿ ಮಂಗಳೂರು ಉತ್ತರ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.