ಹುಬ್ಬಳ್ಳಿ: ನಿದ್ದೆ ಮಂಪರಲ್ಲಿ ಸಿಲಿಂಡರ್ಗೆ ಕಾಲು ತಾಗಿದ ಪರಿಣಾಮ ದೇವರ ಮುಂದೆ ಇದ್ದ ದೀಪಕ್ಕೆ ತಗುಲಿ ಸಿಲಿಂಡರ್ ಬ್ಲಾಸ್ಟ್ ಆಗಿ 9 ಜನ ಮಾಲಾಧಾರಿಗಳಿಗೆ ಗಾಯಗಳಾಗಿರುವಂತಹ ಘಟನೆ ನಡೆದಿದೆ.
ನಿನ್ನೆ ತಡರಾತ್ರಿ ಒಂದು ಗಂಟೆ ಸುಮಾರಿಗೆ ನಗರದ ಉಣಕಲ್ ಸಮೀಪದ ಅಚ್ಚವ್ವನ ಕಾಲೋನಿಯಲ್ಲಿರುವ ಈಶ್ವರ ದೇವಸ್ಥಾನದ ಮೇಲೆ ಇರುವ ಅಯ್ಯಪ್ಪನ ಸನ್ನಿಧಿಯಲ್ಲಿ ಅವಘಡ ಸಂಭವಿಸಿದ್ದು, 8 ಮಾಲಾಧಾರಿಗಳು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದಾರೆ.
8X10 ಅಳತೆಯ ಚಿಕ್ಕ ಕೋಣೆಯಲ್ಲಿ ಒಂಬತ್ತು ಜನ ಅಯ್ಯಪ್ಪ ಮಾಲಾಧಾರಿಗಳು ಮಲಗಿದ್ದರು. ಈ ವೇಳೆ ನಿದ್ರೆ ಮಂಪರಿನಲ್ಲಿ ಅಯ್ಯಪ್ಪ ಮಾಲಾಧಾರಿಯೊಬ್ಬರ ಕಾಲು ಸಿಲಿಂಡರ್ಗೆ ತಾಗಿದೆ. ಪರಿಣಾಮ ಅದು ಅಯ್ಯಪ್ಪನ ಮುಂದೆ ಇದ್ದ ದೀಪಕ್ಕೆ ಹತ್ತಿಕೊಂಡು ಸಿಲಿಂಡರ್ ಬ್ಲಾಸ್ಟ್ ಆಗಿದೆ. ಕಳೆದ ಮೂರು ದಿನಗಳಿಂದ ಅಯ್ಯಪ್ಪ ಮಾಲಾಧಾರಿಗಳು ಸಿಲಿಂಡರ್ ಬಳಕೆ ಮಾಡಿರಲಿಲ್ಲ, ರೆಗ್ಯುಲೇಟರ್ ಪೈಪ್ನಿಂದ ಸಣ್ಣದಾಗಿ ಅನಿಲ ಸೋರಿಕೆಯಾಗಿದ ಹಿನ್ನಲೆ ಸಿಲಿಂಡರ್, ದೀಪಕ್ಕೆ ತಾಗಿದ ಕೂಡಲೇ ಬ್ಲಾಸ್ಟ್ ಆಗಿದೆ. ಪರಿಣಾಮ ಸನ್ನಿಧಿಯಲ್ಲಿದ್ದ 9 ಮಾಲಾಧಾರಿಗಳು ಗಾಯಗೊಂಡಿದ್ದಾರೆ.
ತಡರಾತ್ರಿ ಒಂದು ಗಂಟೆ ಸುಮಾರಿಗೆ ಜೋರಾದ ಶಬ್ದ ಕೇಳಿದ್ದು, ಅಲ್ಲದೆ ಕೋಣೆಯ ತುಂಬೆಲ್ಲಾ ಬೆಂಕಿ ಆವರಿಸಿಕೊಂಡಿದ್ದನ್ನು ನೋಡಿ ಓಡೋಡಿ ಬಂದ ಸ್ಥಳೀಯರು, ಮಾಲಾಧಾರಿಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. 9 ಜನರ ಪೈಕಿ ತಂದೆ, ಮಗ ಕೂಡ ಮಾಲಾಧಾರಣೆ ಮಾಡಿದ್ದರು. 42 ವರ್ಷದ ಪ್ರಕಾಶ್ ಬಾರಕೇರ್ ಹಾಗೂ 12 ವರ್ಷದ ವಿನಾಯಕ್ ಬಾರಕೇರ್ ಕಳೆದ ಮೂರು ದಿನಗಳ ಹಿಂದೆ ಮಾಲಾಧಾರಣೆ ಮಾಡಿದ್ದರು. ಅವಘಡದಲ್ಲಿ ಇಬ್ಬರಿಗೂ ಗಂಭೀರ ಗಾಯವಾಗಿದೆ. ಸದ್ಯ ಇಬ್ಬರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ 12 ವರ್ಷದ ವಿನಾಯಕ್ ಬಾರಕೇರ್ಗೆ ಶೇಕಡಾ 25 ರಷ್ಟು ಸುಟ್ಟ ಗಾಯವಾಗಿದ್ದು, ತಂದೆ ಪ್ರಕಾಶ್ ಬಾರಕೇರ್ಗೆ ಶೇ 91 ರಷ್ಟು ಸುಟ್ಟಗಾಯವಾಗಿದೆ.
ಇನ್ನು ನಿನ್ನೆ ತಡರಾತ್ರಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಬಂದಾಗ ಕಿಮ್ಸ್ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಸರಿಯಾದ ಸಮಯಕ್ಕೆ ಔಷಧಿ ನೀಡಿಲ್ಲವಂತೆ, ಅಲ್ಲದೆ ಗಾಯಕ್ಕೆ ಬೇಕಾದ ಔಷಧಿಯನ್ನು ಹೊರಗೆ ಬರೆದುಕೊಟ್ಟಿದ್ದಾರಂತೆ. ಔಷಧಿ ಕೊಡದೆ ಇದ್ದಾಗ ಅಯ್ಯಪ್ಪ ಮಾಲಾಧಾರಿಗಳೆ ಔಷಧ ಗೋದಾಮಿನ ಕೀ ಮುರಿದು ಔಷಧ ತಂದಿದ್ದಾರಂತೆ. ಯಾವಾಗ ಅಯ್ಯಪ್ಪ ಮಾಲಾಧಾರಿಗಳ ಆಕ್ರೋಶ ಹೆಚ್ಚಾಯ್ತೋ, ಕಿಮ್ಸ್ ಸಿಬ್ಬಂದಿ, ಮಾಲಾಧಾರಿಗಳ ಚಿಕಿತ್ಸೆಗೆ ಪ್ರತ್ಯೇಕ ಕೊಠಡಿ ಮೀಸಲಿಟ್ಟಿದ್ದಾರೆ. ಕಿಮ್ಸ್ ಆಡಳಿತ ಮಂಡಳಿ ವಿರುದ್ಧ ಅಯ್ಯಪ್ಪ ಮಾಲಾಧಾರಿಗಳು ಹಾಗೂ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ.