ಪ್ರೀತಿ ಮಧುರ, ತ್ಯಾಗ ಅಮರ ಅನ್ನೋ ಮಾತಿದೆ. ಪ್ರೀತಿ ಮಾಡಿ ಆ ಪ್ರೀತಿ ಮುರಿದು ಬಿದ್ರೆ ಅದನ್ನೇ ಮನಸಿಗೆ ಹಚ್ಚಿಕೊಂಡು ಹುಚ್ಚರಾಗೋರು ತುಂಬಾ ಜನ. ಇನ್ನು ಹೋದ್ರೆ ಹೋಗ್ಲಿ ಅಂತ ಸುಮ್ನೆ ಅಗೋರು ಕೆಲವರು. ಇದರ ಮಧ್ಯೆ ಪ್ರೀತಿ ಏನ್ ಬೇಕಾದ್ರೂ ಮಾಡಿಸುತ್ತೆ ಅನ್ನೋದು ಪದೇ ಪದೇ ಪ್ರೂವ್ ಆಗ್ತಾನೆ ಇರುತ್ತೆ. ಇದೀಗ ಹಳೇ ಪ್ರೀತಿಯ ನೆನಪಲ್ಲಿ ಭಗ್ಮ ಪ್ರೇಮಿಯೊಬ್ಬ ಭೀಕರ ಕೊಲೆಗೈದಿದ್ದಾನೆ.ಪ್ರೀತಿಸಿದ ಹುಡುಗಿ ಕೈ ಕೊಟ್ಟಳು ಅಂತ ಭಗ್ಮ ಪ್ರೇಮಿಯೊಬ್ಬ ಅವಳ ಗಂಡನನ್ನೇ ಕೊಲೆ ಮಾಡಿದ ಕಥೆ ಇದು.
ಈ ಫೋಟೋದಲ್ಲಿರೋ ವ್ಯಕ್ತಿಯೇ ಆ ಭಗ್ನಪ್ರೇಮಿ, ಹೆಸರು ಪ್ರೀತಮ್ ಡಿಸೋಜ. ಈ ಪ್ರೀತಮ್ ಶಿರಸಿ ಮೂಲದ ಪೂಜಾ ಎಂಬಾಕೆಯನ್ನ ಕಳೆದ ಹತ್ತು ವರ್ಷದಿಂದ ಪ್ರೀತಿಸುತ್ತಿದ್ದ. ಆಕೆಯೂ ಈತನನ್ನು ಪ್ರೀತಿಸುತಿದ್ದಳು. ಆದ್ರೆ ಕೆಲಸಕ್ಕಾಗಿ ಬೆಂಗಳೂರಿಗೆ ಹೋದ ಪೂಜಾ ಅಲ್ಲಿ ಪರಿಚಯವಾದ ಸಾಗರ ತಾಲೂಕಿನ ನೀಚಡಿಯ ಗಂಗಾಧರ್ ಅನ್ನೋರನ್ನ ಮದುವೆಯಾಗೋಕೆ ನಿಶ್ಚಯಿಸುತ್ತಾಳೆ. ಕಳೆದ ನಾಲ್ಕು ತಿಂಗಳ ಹಿಂದೆ ಮದುವೆ ಕೂಡ ಆಗುತ್ತೆ. ಸಂತೋಷವಾಗಿ ಜೀವನ ಕೂಡ ನಡೆಸುತ್ತಿದ್ರು. ಬೆಂಗಳೂರಿನಿಂದ ಊರಿಗೆ ಅಂತ ಗಂಗಾಧರ್ ಹಾಗೂ ಪೂಜಾ ಸಂಬಂಧಿಕರ ಊರಿಗೆ ಬಂದಿದ್ರು.
ಪತ್ನಿಯೊಂದಿಗೆ ಬಂದಿದ್ದ ಗಂಗಾಧರ್ ಹಾಗೂ ಪೂಜಾ ಸಂಬಂಧಿಕರ ಕಾರ್ಯಕ್ರಮ ಮುಗಿಸಿಕೊಂಡು ರಾತ್ರಿ ಬೆಂಗಳೂರಿಗೆ ಹೊರಟಿದ್ರು. ಶಿರಸಿಯ ಹೊಸ ಬಸ್ ನಿಲ್ದಾಣದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಹತ್ತಿದ್ರು. ಈ ವಿಷಯ ತಿಳಿದಿದ್ದ ಪ್ರೀತಮ್ ಡಿಸೋಜಾ ಕೂಡ ಅದೇ ಬಸ್‌ನ ಹತ್ತಿದ್ದ. ಬಸ್ ಹತ್ತಿದವನೇ ಏಕಾಏಕಿ ಗಂಗಾಧರ್ ಜೊತೆ ಜಗಳ ತೆಗೆದಿದ್ದಾನೆ. ಬಸ್ ಅಲ್ಲಿಂದ ಹೊರಟು ಹಳೇ ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಶಿರಸಿಯ ಸರ್ಕಾರಿ ಆಸ್ಪತ್ರೆ ಹತ್ತಿರ ಬಂದಾಗ ಪ್ರೀತಮ್, ಗಂಗಾಧರ್ ಎದೆ ಭಾಗಕ್ಕೆ ಚಾಕುವಿನಿಂದ ಚುಚ್ಚಿದ್ದಾನೆ. ಈ ವೇಳೆ ತಡೆಯೋಕೆ ಬಂದ ಪೂಜಾಳ ಕೈಗೂ ಕೂಡ ಚಾಕುವಿನಿಂದ ಚುಚ್ಚಿ ಅಲ್ಲಿಂದ ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಗಂಗಾಧರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ವಿಷಯ ತಿಳಿದ ಶಿರಸಿ ನಗರ ಠಾಣೆಯ ಪೊಲೀಸರು ಆಸ್ಪತ್ರೆಗೆ ತೆರಳಿ ಪೂಜಾಳಿಂದ ಮಾಹಿತಿ ಪಡೆದಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾಗಿ ಹತ್ಯೆ ನಡೆದ ಅರ್ಧ ಗಂಟೆಯಲ್ಲಿ ಕೊಲೆಗಾರ ಪ್ರೀತಮ್ ಡಿಸೋಜಾನನ್ನ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರೀತಿ ಮಾಡಿದ್ದ ಇವನು. ಮೋಸ ಮಾಡಿದ್ದು ಅವಳು. ಆದ್ರೆ, ಏನೂ ಮಾಡದ ತಪ್ಪಿಗೆ ಪತಿ ಗಂಗಾಧರ್ ಪತ್ನಿಯ ಎದುರೇ ದಾರುಣವಾಗಿ ಅಂತ್ಯಕಂಡಿದ್ದಾನೆ. ಸಂಚರಿಸುತ್ತಿದ್ದ ಬಸ್‌ನಲ್ಲೇ ಭೀಕರ ಕೊಲೆ ನಡೆದಿರೋದು ಶಿರಸಿಯ ಜನರನ್ನ ಬೆಚ್ಚಿಬೀಳಿಸಿರೋದಂತೂ ನಿಜ.