ಮಂಗಳೂರು: ಮಂಗಳೂರಿನಲ್ಲಿರುವ
ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸವ್ ೯ ಲಿಮಿಟೆಡ್ (ಐಎಸ್ಪಿಆರ್ಎಲ್)ನ ಕಚ್ಚಾ ತೈಲ ಸಂಗ್ರಹಾಗಾರ ಘಟಕದಲ್ಲಿ ದುಡಿಯುತ್ತಿರುವ ಉದ್ಯೋಗಿಗಳ ವೇತನ ತಾರತಮ್ಯ, ಭತ್ಯೆ-ಭಡ್ತಿ ಸಮಸ್ಯೆಗೆ ವ್ಯವಸ್ಥಿತ ಎಚ್ಆರ್ ನೀತಿಯನ್ನು ಅನುಷ್ಠಾನಗೊಳಿಸುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಪಂಕಜ್ ಜೈನ್ ಅವರಿಗೆ ಮನವಿ ಮಾಡಿದ್ದಾರೆ.
ಹೊಸದಿಲ್ಲಿಯಲ್ಲಿ ಸೋಮವಾರ ಪಂಕಜ್ ಅವರನ್ನು ಭೇಟಿ ಮಾಡಿದ ಸಂಸದರು, ಸುಮಾರು 8 ವರ್ಷಗಳಿಂದ ಬಗೆಹರಿಯದೆ ತೊಂದರೆ ಅನುಭವಿಸುತ್ತಿರುವ ಮಂಗಳೂರಿನ ಐಎಸ್ಪಿಆರ್ ಎಲ್ ಘಟಕದ ಉದ್ಯೋಗಿಗಳ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸುವಂತೆ ಕೋರಿದ್ದಾರೆ.

ಜತೆಗೆ, ಈ ಕಚ್ಚಾ ತೈಲ ಸಂಗ್ರಹಾಗಾರ ಘಟಕದಲ್ಲಿ ದುಡಿಯುವ ಉದ್ಯೋಗಿಗಳಿಗೆ ವ್ಯವಸ್ಥಿತ ಮಾನವ ಸಂಪನ್ಮೂಲ ನೀತಿಯಿಲ್ಲದೆ ಏನೆಲ್ಲ ತೊಂದರೆ ಅನುಭವಿಸುತ್ತಿದ್ದಾರೆ ಎಂಬುದರ ಬಗ್ಗೆ ಸುದೀರ್ಘವಾಗಿ ಚರ್ಚಿಸಿ, ಇಲ್ಲಿನ ನೌಕರರು ಎದುರಿಸುತ್ತಿರುವ ಗಂಭೀರ ಔದ್ಯೋಗಿಕ ಸಮಸ್ಯೆಗಳನ್ನು ಕಾರ್ಯದರ್ಶಿಯವರಿಗೆ ಮನವರಿಕೆ ಮಾಡಿದ್ದಾರೆ.
ಸಾರ್ವಜನಿಕ ವಲಯದ ತೈಲ ಸಂಸ್ಥೆಗಳಿಂದ ನಿಯೋಜನೆಗೊಳ್ಳುವ ಅಧಿಕಾರಿಗಳಿಗೆ ಹೋಲಿಸಿದರೆ ಈ ಐಎಸ್ಪಿಆರ್ಎಲ್ ಘಟಕಕ್ಕೆ ನೇರ ನೇಮಕವಾಗುವ ಉದ್ಯೋಗಿಗಳ ವೇತನ ಪಾವತಿ ಹಾಗೂ ಭತ್ಯೆ ನೀಡುವಲ್ಲಿ ಸಾಕಷ್ಟು ತಾರತಮ್ಯ ಮಾಡಲಾಗುತ್ತಿದೆ.
ಐಎಪಿಆರ್ ಎಲ್ನಲ್ಲಿ ಹಲವರು ಸುಮಾರು 5 ವರ್ಷಗಳಿಂದ ಯಾವುದೇ ಭಡ್ತಿ ದೊರೆಯದೆ ಒಂದೇ ಸ್ಥಾನದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲಸದ ಅವಧಿಯಲ್ಲಿಯೂ ತಾರತಮ್ಯವಿದ್ದು, ಮಂಗಳೂರಿನ ಐಎಸ್ ಪಿಆರ್ ಎಲ್ನಲ್ಲಿರುವ ಉದ್ಯೋಗಿಗಳು ವಾರಕ್ಕೆ 6 ದಿನ ಕೆಲಸ ಮಾಡಬೇಕು.
ಅದೇ ನೋಯ್ದಾದ ಐಎಸ್ ಪಿಆರ್ಎಲ್ ಕೇಂದ್ರ ಕಚೇರಿ ಅಧಿಕಾರಿಗಳಿಗೆ ವಾರಕ್ಕೆ ಐದು ದಿನ ಮಾತ್ರ ಕೆಲಸ ಮಾಡುವ ಸೌಲಭ್ಯವಿದೆ ಎಂದು ಕ್ಯಾ. ಚೌಟ ಅವರು ಕಾರ್ಯದರ್ಶಿ ಅವರ ಗಮನಸೆಳೆದಿದ್ದಾರೆ.
ಅತ್ಯಂತ ಅಪಾಯಕಾರಿ ಉದ್ಯೋಗದ ಸವಾಲುಗಳಿರುವ ಸ್ಥಳವಾಗಿದ್ದರೂ, ಇಲ್ಲಿನ ಉದ್ಯೋಗಿಗಳಿಗೆ ಸರಿಯಾದ ವೈದ್ಯ ಸೌಲಭ್ಯ, ವಿಮಾ ವ್ಯವಸ್ಥೆ, ಪಿಂಚಣಿ, ಗ್ರಾಚ್ಯುಟಿ, ಶಿಫ್ಟ್ ಭತ್ಯೆ, ಅಪಘಾತ ಪರಿಹಾರ ಸೇರಿ ಯಾವುದೇ ಕಾರ್ಮಿಕ ಸವಲತ್ತುಗಳಿಲ್ಲ. ಬೇರೆ ಕೈಗಾರಿಕೆಗಳಿಗೆ ಹೋಲಿಸಿದರೆ ಐಎಸ್ಪಿಆರ್ಎಲ್ ನಲ್ಲಿ ಪಿಡಿಎಫ್ ತರಬೇತಿ ಅವಧಿಯು ಒಂದರ ಬದಲಿಗೆ 2 ವರ್ಷಗಳಾಗಿದೆ. ಇದರಿಂದ ಅವರ ವೃತ್ತಿ ಭವಿಷ್ಯಕ್ಕೂ ತೊಂದರೆಯಾಗುತ್ತಿದೆ ಎಂದು ಕ್ಯಾ. ಚೌಟ ಅವರು ಇದೇ ವೇಳೆ ಗಮನಕ್ಕೆ ತಂದಿದ್ದಾರೆ.
ಘಟಕದಲ್ಲಿ ದುಡಿಯುತ್ತಿರುವ ಉದ್ಯೋಗಿಗಳಿಗೆ ಸಮಗ್ರ ಎಚ್ ಆರ್ (ಮಾನವ ಸಂಪನ್ಮೂಲ) ನೀತಿ ರೂಪಿಸಬೇಕು. ಜತೆಗೆ ವೇತನ ಆದ್ಯತೆ, ಉತ್ತಮ ಸೌಲಭ್ಯ, ಸೇವಾ ಭದ್ರತೆಗಾಗಿ ಈ ಕೂಡಲೇ ಮಧ್ಯಂತರ ಪರಿಹಾರವನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಕ್ಯಾ. ಚೌಟ ಅವರು ಕೋರಿದ್ದಾರೆ.
ಸಂಸದರ ಮನವಿ ಆಲಿಸಿದ ಪಂಕಜ್ ಜೈನ್ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಆದಷ್ಟು ಬೇಗ ಮಂಗಳೂರಿನ ಐಎಸ್ಪಿಆಎಲ್ ಕಚ್ಚಾ ತೈಲ ಸಂಗ್ರಹಾಗಾರ ಘಟಕದ ಉದ್ಯೋಗಿಗಳ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ.
ಪೆಟ್ರೋಲಿಯಂ ಸಚಿವಾಲಯ ಕಾರ್ಯದರ್ಶಿ ಪಂಕಜ್ ಜೈನ್ ಭೇಟಿ ಬಳಿಕ ಪ್ರತಿಕ್ರಿಯಿಸಿರುವ ಕ್ಯಾ. ಚೌಟ, ಐಎಸ್ಪಿಆರ್ಎಲ್ನ ಉದ್ಯೋಗಿಗಳ ಸಮಸ್ಯೆಗೆ ಶೀಘ್ರ ಪರಿಹಾರ ದೊರೆಯುವ ಪೂರ್ಣ ವಿಶ್ವಾಸವಿದೆ ಎಂದು ಹೇಳಿದ್ದಾರೆ.