ಕಳೆದ ಭಾನುವಾರ ಕಾಮಸಮುದ್ರ ರಸ್ತೆಯಲ್ಲಿನ ಅರಣ್ಯ ಪ್ರದೇಶದಲ್ಲಿ ಕೊಲೆಯಾಗಿದ್ದ ರೌಡಿಶೀಟರ್ ಶಿವಕುಮಾರ್ನ ಕೊಲೆ ರಹಸ್ಯವನ್ನು ಪೊಲೀಸರು ಭೇದಿಸಿದ್ದು, ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ.
ಕೋಲಾರ ಜಿಲ್ಲೆಯ ಕೆಜಿಎಫ್ನ ಮಾರಿಕುಪ್ಪಂ ಬಡಾವಣೆಯ ರಿವೀಟರ್ಸ್ ಲೈನ್ ನಿವಾಸಿ ಶಿವಕುಮಾರ್ ಮತ್ತು ಆರೋಪಿ ಅಪ್ರಾಪ್ತೆ ಇಬ್ಬರು ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿಗೆ ಮನೆಯವರೂ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಮದುವೆ ಕೂಡ ನಿಶ್ಚಯವಾಗಿತ್ತು. ಪ್ರೀತಿಸಿದವಳನ್ನೇ ಮದುವೆಯಾಗಿ ಸಂಸಾರ ನಡೆಸುವ ಕನಸು ಕಂಡಿದ್ದ ಶಿವಕುಮಾರ್ಗೆ ಆಗಿದ್ದೇ ಬೇರೆ.
ಲವ್ ಮರ್ಡರ್!
ಕಳೆದ 5 ವರ್ಷದಿಂದ ರೌಡಿ ಶೀಟರ್ ಶಿವಕುಮಾರ್ನನ್ನು ಅಪ್ರಾಪ್ತೆ ಪ್ರೀತಿಸುತ್ತಿದ್ದಳು. ನರ್ಸಿಂಗ್ ಓದಲು ಕಾಲೇಜಿಗೆ ಸೇರಿದ್ದ ಅಪ್ರಾಪ್ತೆ. ತನ್ನ ಜೊತೆಗೆ ನರ್ಸಿಂಗ್ ಓದುತ್ತಿದ್ದ ಯುವಕ ಜೊತೆಗೆ ಪ್ರೇಮದ ಬಲೆಗೆ ಬಿದ್ದಿದ್ದಳು. ಇದಕ್ಕೆ ಶಿವಕುಮಾರ್ ಅಡ್ಡಿಯಾಗ್ತಾನೆ ಎಂಬ ಕಾರಣಕ್ಕೆ ಅಪ್ರಾಪ್ತೆ, ಕಾಲೇಜು ಪ್ರಿಯಕರನ ಜೊತೆ ಸೇರಿಯೇ ಶಿವಕುಮಾರ್ಗೆ ಮುಹೂರ್ತ ಫಿಕ್ಸ್ ಮಾಡಿದ್ದಳು.
ಅದರಂತೆ.. ಕಾಮಸಮುದ್ರಕ್ಕೆ ಹೋಗಿ ಮೀನು ತಿಂದುಕೊಂಡು ಬರೋಣ ಬಾ ಎಂದು ಶಿವಕುಮಾರ್ನನ್ನು ಪುಸಲಾಯಿಸಿ ಬೈಕ್ನಲ್ಲಿ ಜಾಲಿ ರೈಡ್ ಕರೆದೊಯ್ದಿದ್ದಾಳೆ. ಬಳಿಕ ಮಾರ್ಗ ಮಧ್ಯೆ ಇರುವ ಬಿಸಾನತ್ತಂ ಕಾಡು ಪ್ರದೇಶದಲ್ಲಿ ತನ್ನ ಹಾಲಿ ಅಪ್ರಾಪ್ತ ಪ್ರಿಯಕರ ಮತ್ತು ಆತನ ಸ್ನೇಹಿತರ ಜೊತೆ ಸೇರಿ ಕೊಲೆ ಮಾಡಿಸಿದ್ದಾಳೆ. ಬಳಿಕ ಅಲ್ಲಿಂದ ನೇರವಾಗಿ ಌಂಡರ್ ಸನ್ ಪೊಲೀಸ್ ಠಾಣೆಗೆ ಬಂದು ತನ್ನ ಬಾವಿ ಪತಿಯನ್ನು ಯಾರೋ ಕೊಲೆ ಮಾಡಿದ್ದಾರೆಂದು ನಾಟಕ ಮಾಡಿದ್ದಳು. ಇನ್ನು ಶಿವಕುಮಾರ್ ಮನೆಯಲ್ಲಿ ಆತನ ಪೋಷಕರು ಕಣ್ಣೀರಿಡುತ್ತಿದ್ದರೆ, ಪಕ್ಕದ ಮನೆಯಲ್ಲೇ ಇದ್ದ ಇವಳು ಕೊಲೆ ಕುರಿತು ಕಥೆ ಕಟ್ಟಿ ಎಲ್ಲರನ್ನೂ ದಾರಿ ತಪ್ಪಿಸಿದ್ದಳು.
ಇವಳ ಹೇಳಿಕೆಯಿಂದ ಅನುಮಾನಗೊಂಡ ಪೋಲೀಸರು ಕಾಮಸಮುದ್ರಕ್ಕೆ ತೆರಳುವ ಮಾರ್ಗದ ಎಲ್ಲ ಸಿಸಿಟಿವಿಗಳನ್ನು ಪರಿಶೀಲನೆ ಮಾಡಿದ್ದಾರೆ. ಆಗ ಒಂದೇ ಬೈಕ್ನಲ್ಲಿ ಮೂವರು ಅತ್ತ ತೆರಳಿದ್ದು ಕಂಡು ಬಂದಿದೆ. ಸಿಸಿಟಿವಿ ದೃಶ್ಯ ಆಧರಿಸಿ ಆ ಮೂವರನ್ನು ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿದಾಗ ಇದೆಲ್ಲ, ಅಪ್ರಾಪ್ತೆಯದ್ದೇ ಪ್ಲಾನ್ ಎಂದು ಬಾಯ್ಬಿಟ್ಟಿದ್ದಾರೆ. ಸದ್ಯ ಪೊಲೀಸರು ಅಪ್ರಾಪ್ತೆ ಸೇರಿ ನಾಲ್ವರನ್ನು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದಾರೆ.



























