ಸೌಜನ್ಯ ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಆಕೆ ಹಾಗೂ ಕುಟುಂಬಕ್ಕೆ ನ್ಯಾಯ ಒದಗಿಸಲು ಹೋರಾಟ ನಡೆಸುತ್ತೇನೆ ಎಂದು ಚಲನಚಿತ್ರ ನಟ , ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಹೇಳಿದರು.
ಅವರು ಇಂದು ಧರ್ಮಸ್ಥಳ ಗ್ರಾಮದ ಪಾಂಗಳ ಸೌಜನ್ಯ ಮನೆಯಲ್ಲಿ ತಾಯಿ ಕುಸುಮಾವತಿ ಹಾಗೂ ಕುಟುಂಬಸ್ಥರನ್ನು ಭೇಟಿ ಮಾಡಿ ಪತ್ರಕರ್ತರೊಂದಿಗೆ ಮಾತನಾಡಿದರು .

ರಾಜ್ಯದ ಗೃಹ ಸಚಿವರ ಜೊತೆಗೆ ಸೌಜನ್ಯ ಮನೆಯರೊಂದಿಗೆ ಮಾತುಕತೆಗಾಗಿ ಮಧ್ಯಸ್ಥಿಕೆ ವಹಿಸುತ್ತೇನೆ. ಸೌಜನ್ಯ ನ್ಯಾಯಕ್ಕಾಗಿ ನನ್ನ ಹೋರಾಟವನ್ನು ಮೀಸಲಿಡುತ್ತೇನೆ.
ಸೌಜನ್ಯಳು ಕುಸುಮಾವತಿರವರ ಮಗಳು ಮಾತ್ರವಲ್ಲದೆ ನಮ್ಮೆಲ್ಲರ ಮಗಳು ಇದಕ್ಕಾಗಿ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಎಲ್ಲರೂ ಒಂದಾಗಬೇಕು. ಈ ಹೋರಾಟ ರಾಜ್ಯಕ್ಕೆ ಸೀಮಿತವಾಗದೆ ಇಡೀ ದೇಶಕ್ಕೆ ವಿಸ್ತಾರವಾಗಬೇಕು.
ಇದಕ್ಕಾಗಿ ನಾವೆಲ್ಲರೂ ದುಡಿಯುವ ಅಗತ್ಯವಿದೆ ಎಂದ ಅವರು ಸೌಜನ್ಯ ನ್ಯಾಯಕ್ಕಾಗಿ ಇಡೀ ರಾಜ್ಯದ 80% ಜನರು ತಯಾರಾಗಿದ್ದಾರೆ ಎನ್ನುವುದಕ್ಕೆ ಶಮೀರ್ ಎನ್ನುವ ಯುವಕನ ಯೂಟ್ಯೂಬ್ ಸಾಕ್ಷಿ.
ರಾಜ್ಯದಲ್ಲಿ ಕನ್ನಡ ಮಾತನಾಡುವ 5.50 ಕೋಟಿ ಜನರಲ್ಲಿ 2.50 ಕೋಟಿಗೂ ಹೆಚ್ಚಿನ ಜನರು ಆ ವಿಡಿಯೋ ವೀಕ್ಷಿಸಿದ್ದಾರೆ ಎಂದರೆ ಈ ಹೋರಾಟ ಮುಂದಿನ ದಿನಗಳಲ್ಲಿ ಬೆಂಕಿಯುಂಡೆಯ ಸ್ವರೂಪ ಪಡೆಯಬಹುದು ಎಂದು ಎಚ್ಚರಿಸಿದ ಅವರು ರಾಜ್ಯ ಸರ್ಕಾರ ಈ ಬಗ್ಗೆ ಸೂಕ್ತ ತನಿಖೆಗೆ ಆದೇಶ ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟಗಳನ್ನು ಎದುರಿಸಬೇಕಾದೀತೆಂದು ಎಚ್ಚರಿಕೆ ನೀಡಿದ ಅವರು ಸೌಜನ್ಯ ಹೋರಾಟದ ವಿಚಾರದಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಒಟ್ಟಾಗಬೇಕು ಎಂದು ಹೋರಾಟಗಾರರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸೌಜನ್ಯಳ ಅಜ್ಜ ಬಾಬು ಗೌಡ , ಮಾವ ವಿಠ್ಠಲ ಗೌಡ , ಸಾಮಾಜಿಕ ಹೋರಾಟಗಾರ ಶೇಖರ್ ಲಾಯಿಲ , ಬರಹಗಾರ ಶಫಿ ಬಂಗಾಡಿ , ಸಾಮಾಜಿಕ ಕಾರ್ಯಕರ್ತರಾದ ಸದಾನಂದ ನಾಲ್ಕೂರು , ಸತೀಶ್ ಪುದುವೆಟ್ಟು , ಜಯಂತ್ ಟಿ ಮೊದಲಾದವರು ಉಪಸ್ಥಿತರಿದ್ದರು.



























