ಇದು ಐಪಿಎಲ್ (IPL) ಸಮಯ. ಬೆಟ್ಟಿಂಗಳು ಈ ಸಂದರ್ಭದಲ್ಲಿ ಜೋರಾಗಿ ನಡೆಯುತ್ತವೆ. ಕೇವಲ ಮ್ಯಾಚ್ ಯಾರು ವಿನ್ ಆಗುತ್ತಾರೆ ಎಂಬುದರ ಮೇಲೆ ಮಾತ್ರ ಬೆಟ್ಟಿಂಗ್ ನಡೆಯೋದಿಲ್ಲ. ಯಾರು ಟಾಸ್ ಗೆಲ್ಲುತ್ತಾರೆ, ಯಾವ ಓವರ್ನಲ್ಲಿ ಎಷ್ಟು ರನ್ ಬರುತ್ತದೆ ಈ ರೀತಿ ಹಲವು ರೀತಿಗಳಲ್ಲಿ ಬೆಟ್ಟಿಂಗ್ ಮಾಡಲಾಗುತ್ತದೆ. ಈಗ ಈ ರೀತಿಯ ಬೆಟ್ಟಿಂಗ್ಗಳನ್ನು ಪ್ರಮೋಷನ್ ಮಾಡುವ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳಿಗೆ ಸೈಬರ್ ಕ್ರೈಮ್ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ನೋಟಿಸ್ ಕೊಟ್ಟು ಎಚ್ಚರಿಕೆ ನೀಡಿದ್ದಾರೆ. ಇದು ಮರುಕಳಿಸಿದರೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಪೊಲೀಸರು ವಾರ್ನಿಂಗ್ ನೀಡಿದ್ದಾರೆ.
ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳು ಎನಿಸಿಕೊಂಡಿರೋ ವರುಣ್ ಆರಾಧ್ಯ, ಸೋನುಗೌಡ, ಶಿಲ್ಪಾಗೌಡ, ದೀಪಕ್ ಗೌಡ ಸೇರಿ 40ಕ್ಕೂ ಹೆಚ್ಚು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳಿಗೆ ಸೈಬರ್ ಕ್ರೈಂ ಪೊಲೀಸರಿಂದ ವಾರ್ನಿಂಗ್ ಸಿಕ್ಕಿದೆ. ಇವರ ಇನ್ಸ್ಟಾಗ್ರಾಂ ಚಟುವಟಿಕೆಗಳನ್ನು ನೋಡಿ ಈ ವಾರ್ನಿಂಗ್ ನೀಡಲಾಗಿದೆ.
ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಇವರುಗಳು ಬೆಟ್ಟಿಂಗ್ ಪ್ರಮೋಷನ್ ಮಾಡುತ್ತಿದ್ದರು. ಯಾವ ಟೀಂ ಗೆಲ್ಲುತ್ತದೆ, ಯಾವ ಟೀಮ್ ಟಾಸ್ ಗೆಲ್ಲುತ್ತದೆ, ಯಾವ ಟೀಂ ಸೋಲುತ್ತದೆ ಎಂದು ಮಾಹಿತಿ ತಿಳಿಸೋ ವಾಟ್ಸಾಪ್ ಗ್ರೂಪ್ಗಳ ಲಿಂಕ್ ಹಾಕಿ ಅದಕ್ಕೆ ಜಾಯಿನ್ ಆಗುವಂತೆ ಹಿಂಬಾಲಕರ ಬಳಿ ಕೋರುತ್ತಿದ್ದರು. ಬೆಟ್ಟಿಂಗ್ ಬುಕ್ಕಿಗಳು ನೀಡೋ ಡೀಟೆಲ್ಸ್ ಮೇರೆಗೆ ಸ್ಟೋರಿ ಹಾಕಲಾಗುತ್ತಿತ್ತು ಎನ್ನಲಾಗಿದೆ.
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಯಾವುದೇ ಬ್ರ್ಯಾಂಡ್ ಪ್ರಮೋಟ್ ಮಾಡಿದರೂ ಸಾಕಷ್ಟು ಹಣ ಪಡೆಯುತ್ತಾರೆ. ಅದೇ ರೀತಿ ಇವರುಗಳು ಕೂಡ ಪ್ರತಿ ಇನ್ಸ್ಟಾಗ್ರಾಮ್ ಸ್ಟೋರಿಗೆ ಸಾವಿರದಿಂದ ಐದು ಸಾವಿರ ರೂಪಾಯಿ ತನಕ ಹಣ ಪಡೆದಿದ್ದರು. ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಸೈಬರ್ ಪೊಲೀಸರು ಗಮನಿಸಿದ್ದರು.
ಇನ್ಸ್ಟಾಗ್ರಾಮ್ ಚಟುವಟಿಕೆ ಗಮನಿಸಿರುವ ಪೊಲೀಸರು ಕರೆ ಮಾಡಿ ಇವರುಗಳನ್ನು ವಿಚಾರಣೆಗೆ ಪೊಲೀಸರು ಕರೆದಿದ್ದಾರೆ. ಈಗಾಗಲೇ 20ಕ್ಕೂ ಹೆಚ್ಚು ಜನ ರೀಲ್ಸ್ ಇನ್ಫ್ಲುಯೆನ್ಸರ್ಗಳ ವಿಚಾರಣೆ ನಡೆದಿದೆ ಎನ್ನಲಾಗಿದೆ. ಇಲ್ಲಿ ಕೇವಲ ಬೆಂಗಳೂರಿನವರು ಮಾತ್ರ ಇಲ್ಲ. ಮಂಗಳೂರು, ಮಂಡ್ಯ, ಹುಬ್ಬಳ್ಳಿ ಎಲ್ಲಾ ಜಿಲ್ಲೆಗಳ ಇನ್ಫ್ಲುಯೆನ್ಸರ್ಗಳ ಕರೆಸಿ ವಿಚಾರಣೆ ಮಾಡಿದ್ದಾರೆ. ಇನ್ಮುಂದೆ ಬೆಟ್ಟಿಂಗ್ ಪ್ರಮೋಷನ್ ಮಾಡದಂತೆ ಖಡಕ್ ವಾರ್ನ್ ಮಾಡಿ ಕಳುಹಿಸಲಾಗಿದೆ.