ವಾಷಿಂಗ್ಟನ್: ಭಾರತದ ಯುವ ಉದ್ಯಮಿ ಶೃತಿ ಚತುರ್ವೇದಿಗೆ ಅಮೆರಿಕಾದಲ್ಲಿ ಕಹಿ ಅನುಭವ ಆಗಿದೆ. ಅಲಸ್ಕಾ ಏರ್‌ಪೋರ್ಟ್ನಲ್ಲಿ ತಮ್ಮನ್ನು ಎಂಟು ಗಂಟೆ ಅನ್ಯಾಯವಾಗಿ ಎಫ್‌ಬಿಐ ನಿರ್ಬಂಧಿಸಿತ್ತು ಎಂದು ಶೃತಿ ಚತುರ್ವೇದಿ ಆರೋಪಿಸಿದ್ದಾರೆ.
ಹ್ಯಾಂಡ್‌ಬಾಗ್‌ನಲ್ಲಿದ್ದ ಪವರ್‌ಬ್ಯಾಂಕ್ ಅನುಮಾನಾಸ್ಪದವಾಗಿ ಕಾಣಿಸಿದ್ದರಿಂದ ಏರ್‌ಪೋರ್ಟ್ ಸಿಬ್ಬಂದಿ ತಮ್ಮನ್ನು ತಡೆದ್ರು. ಪುರುಷ ಅಧಿಕಾರಿಗಳಿಂದ ತಪಾಸಣೆ ಮಾಡಿಸಿದ್ರು. ಕೊಠಡಿಯಲ್ಲಿ ಎಂಟು ಗಂಟೆ ಇರಿಸಿದ್ರು ಕನಿಷ್ಠ ವಾಶ್ ರೂಂಗೆ ಹೋಗಲು ಅವಕಾಶ ನೀಡಲಿಲ್ಲ. ಇದೆಲ್ಲದ್ರಿಂದ ನಾನು ವಿಮಾನ ಮಿಸ್ ಮಾಡ್ಕೊಂಡೆ ಎಂದು ಅಳಲು ತೋಡಿಕೊಂಡಿದ್ದಾರೆ.
ಅಮೆರಿಕದ ಅಲಾಸ್ಕದಲ್ಲಿರುವ ಆಂಕರೆಜ್ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸಾರ್ವಜನಿಕ ಸಂಪರ್ಕ ಸಂಸ್ಥೆಯ ಸಂಸ್ಥಾಪಕಿ ಶೃತಿ ಚತುರ್ವೇದಿ ತಮಗೆ ಆಗಿರುವ ಕೆಟ್ಟ ಅನುಭವವನ್ನು ಎಕ್ಸ್ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಅಮೆರಿಕದ ಪೊಲೀಸರು ಮತ್ತು ಎಫ್‌ಬಿಐನ ಅಧಿಕಾರಿಗಳು ಆಂಕರೆಜ್ ವಿಮಾನ ನಿಲ್ದಾಣದಲ್ಲಿ ತನ್ನನ್ನು ಎಂಟು ತಾಸು ಬಂಧಿಸಿಟ್ಟಿದ್ದರು ಎಂದು ಆರೋಪಿಸಿದ್ದಾರೆ.
ಹಲವು ತಾಸು ಪ್ರತ್ಯೇಕವಾಗಿ ಅವರನ್ನು ವಿಮಾನ ನಿಲ್ದಾಣದ ಕೋಣೆಯಲ್ಲಿ ಇರಿಸಲಾಗಿತ್ತು ಹಾಗೂ ಪ್ರಶ್ನೆ ಮಾಡಲಾಗಿದೆ. ಅಧಿಕಾರಿಗಳು ಕೆಟ್ಟದಾಗಿ ನಡೆಸಿಕೊಂಡರು ಹಾಗೂ ಎಂಟು ತಾಸು ಕಾಯಿಸಿದರ ಪರಿಣಾಮ, ಪ್ರಯಾಣ ಮಾಡಬೇಕಿದ್ದ ವಿಮಾನವು ತಪ್ಪಿರುವುದಾಗಿ ಆಕ್ರೋಶ ಹೊರಹಾಕಿದ್ದಾರೆ. ಹಾಗೇ ವಶಕ್ಕೆ ಪಡೆದಿದ್ದ ಅವಧಿಯಲ್ಲಿ ಅವರಿಗೆ ಫೋನ್ ಕರೆ ಮಾಡೋಕೂ ಅವಕಾಶ ಕೊಟ್ಟಿಲ್ಲ, ಅವರ ವಸ್ತುಗಳನ್ನು ಕಿತ್ತುಕೊಳ್ಳಲಾಗಿತ್ತು ಹಾಗೂ ಶೌಚಾಲಯ ಬಳಸೋದಕ್ಕೂ ಅವಕಾಶ ಕೊಡದೆ ಚಿತ್ರಹಿಂಸೆ ಕೊಟ್ಟಿರುವುದಾಗಿ ಆರೋಪಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೇ ಪುರುಷ ಅಧಿಕಾರಿಗಳು ದೇಹ ಮುಟ್ಟಿ ಪರಿಶೀಲನೆ ನಡೆಸಿದ್ದಾರೆ ಅನ್ನೋ ಅಂಶವು ಚರ್ಚೆಗೆ ಗ್ರಾಸವಾಗಿದೆ.