ಚೆನ್ನೈ: ಜೀವಂತವಾಗಿರುವ ಮೀನನ್ನು ಬಾಯಲ್ಲಿ ಹಿಡಿದುಕೊಂಡು ಮತ್ತೊಂದು ಮೀನು ಹಿಡಿಯಲು ಹೋದ ಯುವಕ ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಕಳೆದ ತಿಂಗಳು ಕೇರಳದಲ್ಲಿ ಯುವಕನೋರ್ವ ಮೀನು ಹಿಡಿಯುವಾಗ ಯುವಕನ ಗಂಟಲು ಸೇರಿದ್ದ ಮೀನು ಯುವಕನ ಉಸಿರು ನಿಲ್ಲಿಸಿತ್ತು. ಇದೀಗ ತಮಿಳುನಾಡಿನಲ್ಲಿ ಅಂತಹದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.
ತಮಿಳುನಾಡಿನ ಚೆಂಗಲಪಟ್ಟು ಜಿಲ್ಲೆಯ ಆರ್ಯಪಾಕಂ ಗ್ರಾಮದಲ್ಲಿ ಈ ದುರಂತ ನಡೆದಿದೆ. 29 ವರ್ಷದ ಮಣಿಗಂಡನ್ ಎಂಬ ಯುವಕ ಗ್ರಾಮದ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ. ಮಣಿಗಂಡನ್ ಆರ್ಯಪಾಕಂ ಗ್ರಾಮದಲ್ಲೇ ಬರೀಗೈಯಲ್ಲಿ ಮೀನು ಹಿಡಿಯುವುದರಲ್ಲಿ ಸಖತ್ ಫೇಮಸ್ ಆಗಿದ್ದ.
ಮೀನು ಹಿಡುವುದರಲ್ಲಿ ಎಕ್ಸ್‌ಪರ್ಟ್ ಆಗಿದ್ದ ಮಣಿಗಂಡನ್ ಮೊದಲು ಒಂದು ಮೀನು ಹಿಡಿದಿದ್ದಾನೆ. ತಕ್ಷಣವೇ ಮತ್ತೊಂದು ಮೀನು ಕಾಣುತ್ತಿದ್ದಂತೆ, ಕೈಯಲ್ಲಿದ್ದ ಮೀನನ್ನು ಬಾಯಿಗೆ ಇಟ್ಟುಕೊಂಡಿದ್ದಾನೆ.
ಬಾಯಲ್ಲಿ ಇಟ್ಟುಕೊಂಡ ಮೀನು ಆಕಸ್ಮಿಕವಾಗಿ ಮಣಿಗಂಡನ್ ಗಂಟಲು ಪ್ರವೇಶಿಸಿದೆ. ತಕ್ಷಣವೇ ಸ್ಥಳದಲ್ಲಿದ್ದವರು ಮೀನನ್ನು ಗಂಟಲಿನಿಂದ ಹೊರ ತೆಗೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ಬಾಯಲ್ಲಿದ್ದ ಮೀನು ಯುವಕನ ದೇಹ ಪ್ರವೇಶಿಸಿ ಪ್ರಾಣ ಪಕ್ಷಿಯೇ ಹಾರಿ ಹೋಗುವಂತೆ ಮಾಡಿದೆ. ಮಣಿಗಂಟನ್ ಸ್ನೇಹಿತರು ಕೂಡಲೇ ಯುವಕನನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಾಗಲೇ ಮಣಿಗಂಡನ್ ಸಾವನ್ನಪ್ಪಿದ್ದು ವೈದ್ಯರು ಸ್ಪಷ್ಟಪಡಿಸಿದ್ದಾರೆ.