ಬೆಂಗಳೂರು: 21 ವರ್ಷದ ದಂತ ವೈದ್ಯಕೀಯ ವಿದ್ಯಾರ್ಥಿನಿ ಪರೀಕ್ಷಾ ಭಯದಿಂದ ಅಪಾರ್ಟ್ಮೆಂಟ್ನ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಿನ್ನೆ ಮಧ್ಯಾಹ್ನ ನಗರದಲ್ಲಿ ನಡೆದಿದೆ.
ಸೌಮ್ಯ ಆತ್ಮಹತ್ಯೆ ಮಾಡಿಕೊಂಡ ದಂತ ವೈದ್ಯಕೀಯ ವಿದ್ಯಾರ್ಥಿನಿ. ಮೃತ ಸೌಮ್ಯ ಪರೀಕ್ಷಾ ಸಮಯದಲ್ಲಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಆತ್ಮಹತ್ಯೆಗೂ ಮುನ್ನ ಯಾವುದೇ ಡೆತ್ ನೋಟ್ ಬರೆದಿಟ್ಟಿಲ್ಲ. ಸದ್ಯ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಶವಂತಪುರದ ಖಾಸಗಿ ಕಾಲೇಜಿನಲ್ಲಿ ಎರಡನೇ ವರ್ಷದ ದಂತ ವೈದ್ಯಕೀಯ ಕೋರ್ಸ್ ಓದುತ್ತಿದ್ದ ಸೌಮ್ಯ ತಮ್ಮ ತಂದೆ, ತಾಯಿ ಮತ್ತು ಸಹೋದರನ ಜತೆ ವಾಸವಾಗಿದ್ದರು. ಸೌಮ್ಯ ತಂದೆ ಗಣೇಶ್ ನಾರಾಯಣ್ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದಾರೆ. ಮೂಲತಃ ಆಂಧ್ರದವರಾಗಿದ್ದು, ಮಗಳನ್ನು ಓದಿಸುವ ಉದ್ದೇಶಕ್ಕೆ ಕುಟುಂಬ ಸಮೇತ ಬೆಂಗಳೂರಿಗೆ ಬಂದು ನೆಲೆಸಿದ್ದರು.


























